×
Ad

ಕೋಟೆ ಕಾಲೇಜು ಮುಚ್ಚದಿರಲು ವಿದ್ಯಾರ್ಥಿಗಳ ಒತ್ತಾಯ

Update: 2017-07-14 18:47 IST

ಬೆಂಗಳೂರು, ಜು.14: ನಗರದ ಚಾಮರಾಜಪೇಟೆಯಲ್ಲಿರುವ ನೂತನ ಕೋಟೆ ಸರಕಾರಿ ಪದವಿ ಪೂರ್ವ ಕಾಲೇಜನ್ನು ಮುಚ್ಚಲು ಮುಂದಾಗಿರುವ ಸರಕಾರದ ಕ್ರಮವನ್ನು ವಿರೋಧಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಒಕ್ಕೂಟದ ಆಲ್ ಇಂಡಿಯಾ ಡೆಮಾಕ್ರೆಟಿಕ್ (ಎಐಡಿಎಸ್‌ಓ) ಕಾರ್ಯಕರ್ತರು ಇಂದು ನಗರದ ನೃಪತುಂಗ ರಸ್ತೆಯಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ಸರಕಾರದ ಕ್ರಮವನ್ನು ಖಂಡಿಸಿದರು. ಸರಕಾರ ಹೊರಡಿಸಿರುವ ಸುತ್ತೋಲೆ ಪ್ರಕಾರ 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕಾಲೇಜುಗಳಿಗೆ ಬೀಗ ಹಾಕಬೇಕು. ಆದರೆ ನೂತನ ಕೋಟೆ ಪಿಯು ಕಾಲೇಜಿನಲ್ಲಿ 150ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೂ ಕಾಲೇಜನ್ನು ಮುಚ್ಚಲು ಸರಕಾರ ಮುಂದಾಗಿರುವುದು ಸರಿಯಲ್ಲ ಎಂದು ವಿದ್ಯಾರ್ಥಿಗಳು ಕಿಡಿಕಾರಿದರು.

ಪ್ರತಿಭಟನೆಯ ನೇತೃತ್ವವಹಿಸಿದ್ದ ಸಂಘಟನೆಯ ರಾಜ್ಯ ಉಪಾಧ್ಯಕ್ಷ ರವಿ ನಂದನ್ ಮಾತನಾಡಿ, ಪಿಯು ಕಾಲೇಜಿನಲ್ಲಿ 190 ವಿದ್ಯಾರ್ಥಿಗಳಿದ್ದಾರೆ. ಕಾಲೇಜಿನಲ್ಲಿ ಎಲ್ಲ ಮೂಲಭೂತ ಸೌಕರ್ಯಗಳು ಇದ್ದರೂ ಕಾಲೇಜನ್ನು ಮುಚ್ಚಲು ಮುಂದಾಗಿರುವುದು ಸರಿಯಲ್ಲ. ಕೂಡಲೆ ಸರಕಾರ ಈ ನಿರ್ಧಾರವನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.

ಈ ಕಾಲೇಜಿನಲ್ಲಿ ದಲಿತ, ಅಲ್ಪಸಂಖ್ಯಾತ ವಿದ್ಯಾರ್ಥಿಗಳೇ ಓದುತ್ತಿರುವುದು. ಒಂದು ವೇೆಳೆ ಈ ಕಾಲೇಜನ್ನು ಮುಚ್ಚಿದರೆ ಹತ್ತಿರದಲ್ಲಿ ಯಾವುದೇ ಪಿಯು ಕಾಲೇಜು ಇಲ್ಲ. ತರಗತಿಗಳು ಆರಂಭವಾಗಿ ಎರಡು ತಿಂಗಳುಗಳೇ ಕಳೆದಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಲಿದೆ ಎಂದರು.
ಪ್ರತಿಭಟನೆಯ ಬಳಿಕ ಮನವಿ ಪತ್ರವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸಲ್ಲಿಸಿದರು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸರಕಾರ ಯಾವುದೇ ಕಾರಣಕ್ಕೂ ನೂತನ ಕೋಟೆ ಪಿಯು ಕಾಲೇಜನ್ನು ಮುಚ್ಚುವ ಹಾಗೂ ಬೇರೊಂದು ಕಾಲೇಜಿಗೆ ವರ್ಗಾಯಿಸುವ ಕೆಲಸಕ್ಕೆ ಕೈ ಹಾಕದಂತೆ ವಿದ್ಯಾರ್ಥಿಗಳು ಮನವಿ ಮಾಡಿದರು.

ಈ ವೇಳೆ ನಗರ ವಿಭಾಗದ ಕಾರ್ಯದರ್ಶಿಗಳಾದ ಅಜಯ್‌ಕುಮಾರ್, ಐಶ್ವರ್ಯ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News