×
Ad

ಅಪಘಾತ: 15ಕ್ಕೂ ಹೆಚ್ಚು ಮಂದಿಗೆ ಗಾಯ

Update: 2017-07-14 18:55 IST

ಬೆಂಗಳೂರು, ಜು.14: ನಗರದ ಎಲೆಕ್ಟ್ರಾನಿಕ್ ಸಿಟಿ, ಯಲಹಂಕ ಸೇರಿದಂತೆ ಹಲವೆಡೆ ನಡೆದ ಅಪಘಾತದಲ್ಲಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಚಿಕಿತ್ಸೆಗೆ ಸಮೀಪದ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.

ಟೆಂಪೋ ಟ್ರಾವೆಲರ್ ಹಾಗೂ ಕಾರಿನ ನಡುವೆ ನಡೆದ ಮುಖಾಮುಖಿ ಢಿಕ್ಕಿಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಪರಪ್ಪನ ಅಗ್ರಹಾರದ ಕಸುವಿನಹಳ್ಳಿ ರಸ್ತೆಯಲ್ಲಿ ಸಂಭವಿಸಿದೆ. ಟೆಂಪೋ ಟ್ರಾವೆಲರ್‌ನಲ್ಲಿದ್ದ ಮೂವರಿಗೆ ಹಾಗೂ ಕಾರಿನ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ.

ಕಸುವಿನಹಳ್ಳಿಯಲ್ಲಿ ಮುಂಜಾನೆ 4ರ ಸುಮಾರಿಗೆ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ತೆರಳುತ್ತಿದ್ದ ಟೆಂಪೋ ಟ್ರಾವೆಲರ್ ಹಾಗೂ ಸರ್ಜಾಪುರ ಕಡೆಗೆ ಹೋಗುತ್ತಿದ್ದ ಕಾರಿನ ನಡುವೆ ಮುಖಾಮುಖಿ ಢಿಕ್ಕಿ ನಡೆದು ಈ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ಕಾರು ಮತ್ತು ಟೆಂಪೋ ಟ್ರಾವೆಲರ್ ಸಂಪೂರ್ಣ ಜಖಂಗೊಂಡಿದ್ದು, ಸ್ಥಳಕ್ಕೆ ಎಚ್‌ಎಸ್‌ಆರ್ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಯಲಹಂಕ ಬಳಿ ಅಪಘಾತ: ಯಲಹಂಕ ವೆಂಕಟಾಲ ಮೇಲು ಸೇತುವೆ ರಸ್ತೆಯಲ್ಲಿ ಇಂದು ಮುಂಜಾನೆ 4ರ ವೇಳೆ ಲಾರಿಗೆ ಟೆಂಪೋ ಟ್ರಾವೆಲರ್ ಢಿಕ್ಕಿ ಹೊಡೆದು 12 ಮಂದಿ ಗಾಯಗೊಂಡಿದ್ದಾರೆ. ಅದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗೆ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಾರಿ-ಸುಮೋ ಢಿಕ್ಕಿ: 
ರಸ್ತೆ ಕ್ರಾಸ್ ಮಾಡುತ್ತಿದ್ದ ಟಿಪ್ಪರ್ ಲಾರಿಗೆ ಟಾಟಾ ಸುಮೋ ಢಿಕ್ಕಿ ಹೊಡೆದ ಪರಿಣಾಮ ಸುಮೋದಲ್ಲಿದ್ದ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 7ರ ಕನ್ನಮಂಗಲ ಗೇಟ್ ಬಳಿ ಸಂಭವಿಸಿದೆ. 9ಮಂದಿ ಕಾರ್ಮಿಕರಿದ್ದ ಟಾಟಾ ಸುಮೋ ದೇವನಹಳ್ಳಿಯಿಂದ ಏರ್‌ಪೋರ್ಟ್‌ಗೆ ಹೊರಟಿತ್ತು. ಈ ವೇಳೆ ಕನ್ನಮಂಗಲ ಗೇಟ್ ಬಳಿ ಪಕ್ಕದ ರಸ್ತೆಯಿಂದ ಮತ್ತೊಂದು ರಸ್ತೆ ಗೆ ಲಾರಿ ಕ್ರಾಸ್ ಮಾಡುವ ವೇಳೆ ಈ ಘಟನೆ ಸಂಭವಿಸಿದೆ. ಗಾಯಗೊಂಡವರನ್ನು ಯಲಹಂಕ ಹಾಗೂ ದೇವನಹಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕೆಂಪೇಗೌಡ ವಿಮಾನ ನಿಲ್ದಾಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News