ಯಾವ ಪುರುಷಾರ್ಥಕ್ಕೆ ಚರ್ಚೆ: ಮುಖ್ಯಮಂತ್ರಿಗೆ ಬಿಎಸ್‌ವೈ ತಿರುಗೇಟು
ಬೆಂಗಳೂರು, ಜು. 14: ತೀವ್ರ ಸ್ವರೂಪದ ಬರ ಸ್ಥಿತಿಯಿದ್ದು, ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಸಮಸ್ಯೆ ಇರುವ ಸಂದರ್ಭದಲ್ಲಿ ಅಭಿವೃದ್ಧಿಯ ಕುರಿತು ಬಹಿರಂಗ ಚರ್ಚೆಗೆ ಯಾವ ಪುರುಷಾರ್ಥಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಜತೆ ಚರ್ಚೆಗೆ ಹೋಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರಶ್ನಿಸಿದ್ದಾರೆ.
ಶುಕ್ರವಾರ ನಗರದ ಡಾಲರ್ಸ್ ಕಾಲನಿಯಲ್ಲಿನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅಧಿಕಾರದ ಅಮಲಿನಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದು, ಇನ್ನೂ 8-9 ತಿಂಗಳು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿದೆ. ಆ ಬಳಿಕ ಕಾಂಗ್ರೆಸ್ ಎಲ್ಲಿರುತ್ತದೋ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ದೇಶದ ಯಾವ ಮುಖ್ಯಮಂತ್ರಿಗಳೂ ಪ್ರಧಾನಿ ಮೋದಿಯವರನ್ನು ಚರ್ಚೆಗೆ ಬನ್ನಿ ಎಂದು ಕರೆದಿಲ್ಲ. ಆದರೆ, ಸಿದ್ದರಾಮಯ್ಯ ಅಧಿಕಾರವಿದೆ ಎಂದು ಹುಂಬತನದಿಂದ ಮನಸೋ ಇಚ್ಛೆ ಮಾತನಾಡುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಟೀಕಿಸಿದರು.
ಪ್ರಧಾನಿ ಮೋದಿ ಸಾಧನೆ ಬಗ್ಗೆ ವಿಶ್ವವೇ ಕೊಂಡಾಂಡುತ್ತಿದೆ. ರಾಷ್ಟ್ರೀಯ ಭದ್ರತೆ, ಹಣಕಾಸು, ಕೈಗಾರಿಕೆ, ವಿದೇಶಾಂಗ ವ್ಯವಹಾರ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಕೇಂದ್ರ ಸರಕಾರ ಅದ್ವಿತೀಯ ಸಾಧನೆ ಮಾಡಿದೆ. ಆದರೆ, ಸಿದ್ದರಾಮಯ್ಯ, ಪ್ರಧಾನಿ ಚರ್ಚೆ ಆಹ್ವಾನಿಸಿದ್ದು ಮೂರ್ಖತನ ಎಂದು ವಾಗ್ದಾಳಿ ನಡೆಸಿದರು.
ವೈಫಲ್ಯ: ದಕ್ಷಿಣ ಕನ್ನಡ ಕೋಮು ಗಲಭೆಗೆ ರಾಜ್ಯ ಸರಕಾರದ ವೈಫಲ್ಯವೇ ಕಾರಣ. ಗುಪ್ತಚರ ಇಲಾಖೆ ಸರಕಾರದ ಅಧೀನದಲ್ಲಿದ್ದರೂ ಘಟನೆ ತಪ್ಪಿಸಲು ಸಾಧ್ಯವಾಗಿಲ್ಲ. ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಇರುವವರೆಗೂ ಇಲಾಖೆ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.