×
Ad

ಆರೋಪಿ ಲೋಕೇಶ್‌ಗೆ ಹೈಕೋರ್ಟ್ ಜಾಮೀನು

Update: 2017-07-14 20:20 IST

ಬೆಂಗಳೂರು, ಜು.14: ಮೈಸೂರಿನ ಆರ್‌ಟಿಐ ಕಾರ್ಯಕರ್ತ ಶ್ರೀನಾಥ್ ಕೊಲೆ ಪ್ರಕರಣದ ಮೊದಲ ಆರೋಪಿ ಲೋಕೇಶ್‌ಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಈ ಸಂಬಂಧ ಜಾಮೀನು ಕೋರಿ ಲೋಕೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.
   
ಪ್ರಕರಣವೇನು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಭ್ರಷ್ಟಾಚಾರ ಬಯಲಿಗೆಳೆದಿದ್ದ ಶ್ರೀನಾಥ್, ಬಿಇಎಂಎಲ್(ಬೆಮೆಲ್) ಸೊಸೈಟಿಯ ಕೋಟ್ಯಂತರ ರೂ.ಅವ್ಯವಹಾರದ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರು. ವೃತ್ತಿಯಲ್ಲಿ ಗುತ್ತಿಗೆದಾರರಾಗಿದ್ದ ಶ್ರೀನಾಥ್, ಆರ್‌ಟಿಇ ಕಾರ್ಯಕರ್ತರೂ ಆಗಿದ್ದು ಸಾಕಷ್ಟು ಅವ್ಯವಹಾರಗಳನ್ನೂ ಬೆಳಕಿಗೆ ತಂದಿದ್ದರು ಎನ್ನಲಾಗಿತ್ತು. ಅಲ್ಲದೆ, ಶ್ರೀನಾಥ್ ಅವರು ಮುಡಾ ಸಹಾಯಕ ಇಂಜಿನಿಯರ್ ಮಹೇಶ್ ವಿರುದ್ಧ ಎಸಿಬಿ, ಐಟಿ ಅಧಿಕಾರಿಗಳಿಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಮಹೇಶ್ ಮನೆ ಮೇಲೆ ಎಸಿಬಿ ದಾಳಿ ನಡೆಸಿ ಸುಮಾರು 18 ಕೋಟಿ ರೂ.ವೌಲ್ಯದ ಆಸ್ತಿ, ಚಿನ್ನಾಭರಣ, ನಗದು ವಶಪಡಿಸಿಕೊಂಡಿತ್ತು. ಅಲ್ಲದೆ, ಮುಡಾದ ಮತ್ತೊಬ್ಬ ಇಂಜಿನಿಯರ್ ದಿನೇಶ್ ವಿರುದ್ಧವೂ ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಎಸಿಬಿಗೆ ದೂರು ನೀಡಿದ್ದರು. ಇದು ಭ್ರಷ್ಟರ ಕಣ್ಣು ಕೆಂಪಗಾಗಿಸಿತ್ತು ಎನ್ನಲಾಗಿತ್ತು.

ಜೊತೆಗೆ ರಾಜಕಾರಣಿಯೊಬ್ಬರು ಹತ್ಯೆಗೀಡಾದ ಶ್ರೀನಾಥ್‌ರನ್ನು ಕಚೇರಿಗೆ ಕರೆಸಿಕೊಂಡು ಎಚ್ಚರಿಕೆ ನೀಡಿದ್ದರು ಎಂಬ ಆರೋಪ ಸಹ ಕೇಳಿ ಬಂದಿತ್ತು. ಅಲ್ಲದೆ, ಈ ಹಿನ್ನೆಲೆಯಲ್ಲಿಯೇ ಕೊಲೆ ನಡೆದಿದೆ ಎಂದು ಮೃತರ ಅಣ್ಣ ಶ್ರೀನಿವಾಸ್ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News