×
Ad

ತಳ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಇವತ್ತಿಗೂ ಮರೀಚಿಕೆ: ಡಾ.ಬಾಲಗುರುಮೂರ್ತಿ

Update: 2017-07-14 21:21 IST

ಬೆಂಗಳೂರು,ಜು.14: ಸ್ವಾತಂತ್ರ ಸಿಕ್ಕಿ ಏಳು ದಶಕಗಳೇ ಕಳೆದರೂ ಸಾಮಾಜಿಕ ನ್ಯಾಯ ಎಂಬುವುದು ತಳ ಸಮುದಾಯಗಳಗಳಿಗೆ ಕನವರಿಕೆಯಾಗಿ ಉಳಿದುಬಿಟ್ಟಿದೆ ಎಂದು ಅಲೆಮಾರಿ ಬುಡಕಟ್ಟು ಮಹಾಸಭಾದ ರಾಜ್ಯಾಧ್ಯಕ್ಷ ಡಾ.ಬಾಲಗುರುಮೂರ್ತಿ ಕಳವಳ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಬೆಂಗಳೂರು ದಕ್ಷಿಣ ತಾಲ್ಲೂಕು ದೊಡ್ಡೇರಿ ಸರಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಬಂಜಾರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಅಲೆಮಾರಿಗಳ ‘ಕಲೆ, ಸಂಸ್ಕೃತಿ, ಪ್ರಗತಿಪರ ಚಳವಳಿ ಕುರಿತ ವಿಚಾರ ಸಂಕಿರಣ ಹಾಗೂ ಪ್ರಾತ್ಯಕ್ಷಿಕೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ ಬಂದು ಏಳು ದಶಕಗಳೇ ಕಳೆದರೂ ತಳ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಇಂದಿಗೂ ಮರೀಚಿಕೆಯಾಗಿದೆ. ಅಲಕ್ಷಿತ ಸಮುದಾಯಗಳು ಕನಿಷ್ಠ ನಾಗರಿಕ ಸೌಲಭ್ಯಗಳನ್ನೂ ಪಡೆಯದೆ ಉಳಿದುಕೊಂಡಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದಿದ್ದರೂ ಇಂದಿಗೂ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಜೀವಂತವಾಗಿದೆ. ಅಂಬೇಡ್ಕರ್, ಬುದ್ಧ, ಬಸವಣ್ಣನವರಂತಹ ದಾರ್ಶನಿಕರ ಚಿಂತನೆಗಳು ಸಾಕಾರಗೊಳ್ಳಲು ಮತೀಯ ಶಕ್ತಿಗಳು ತೊಡರುಗಾಲಾಗಿವೆ ಎಂದು ಹೇಳಿದರು.

ಬಂಜಾರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಡಾ.ಎ.ಆರ್.ಗೋವಿಂದಸ್ವಾಮಿ ಮಾತನಾಡಿ, ಅವನತಿಯ ಅಂಚಿನಲ್ಲಿರುವ ಬಂಜಾರ ಸಮುದಾಯದ ಕಸೂತಿ ಕಲೆ, ಸಾಹಿತ್ಯ-ಸಂಸ್ಕೃತಿಯನ್ನು ರಕ್ಷಣೆ ಮಾಡಲು ಸರಕಾರ ಮುಂದಾಗಬೇಕು ಎಂದರು.

ನಿರ್ದೇಶಕ ಯೋಗೇಶ್ ಮಾಸ್ಟರ್ ಮಾತನಾಡಿ, ಇತ್ತೀಚಿನ ಚಳವಳಿಗಳು ವಿಕೃತ ರೂಪ ಪಡೆದುಕೊಳ್ಳುತ್ತಿವೆ. ಗೋರಕ್ಷಣೆ ಚಳವಳಿ ಮನುಷ್ಯ ವಿರೋಧಿ ಚಳವಳಿಯಾಗಿ ರೂಪುಗೊಂಡಿವೆ. ನಮ್ಮ ಭಾವನೆ, ಆಹಾರ ಪದ್ಧತಿ, ಉಡುಗೆ ತೊಡುಗೆ, ಕಲೆ, ಸಂಸ್ಕೃತಿಯನ್ನು ಕಿತ್ತುಕೊಂಡು, ಯುವಜನಾಂಗವನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ವಡ್ಡಗೆರೆ ನಾಗರಾಜಯ್ಯ ಮಾತನಾಡಿ, ಬುದ್ದ, ಬಸವಣ್ಣ, ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಯುವ ಜನಾಂಗ ಮೈಗೂಡಿಸಿಕೊಂಡು ತಮ್ಮ ಸುತ್ತಲಿನ ನೊಂದವರಿಗೆ ನ್ಯಾಯ ದೊರಕಿಸಬೇಕಿದೆ ಎಂದು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News