ತೆಲಗಿ ತಂಡಕ್ಕೆ ಕೆಳ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ಎತ್ತಿ ಹಿಡಿದ ಹೈಕೋರ್ಟ್
ಬೆಂಗಳೂರು, ಜು.14: ನಕಲಿ ಛಾಪಾ ಕಾಗದ ಮಾರಾಟ ಮತ್ತು ಮುದ್ರಣ ಹಗರಣದ ಪ್ರಮುಖ ಅಪರಾಧಿ ತೆಲಗಿ ತಂಡದ ಆರು ಜನರಿಗೆ ಸಿಬಿಐ ವಿಶೇಷ ನ್ಯಾಯಾಲಯ ವಿಧಿಸಿದ್ದ 7 ವರ್ಷ ಜೈಲು ಶಿಕ್ಷೆ ಹಾಗೂ 40 ಸಾವಿರ ದಂಡವನ್ನು ಹೈಕೋರ್ಟ್ ಖಾಯಂಗೊಳಿಸಿದೆ.
ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ವಿಠ್ಠಲ್ ಮಾರುತಿ ಸುಣಗಾರ, ಎ.ಡಿ.ಚೇತನ್, ನೂರ್ ಅಹಮದ್, ಅಮ್ಜದ್‌ಖಾನ್, ನವಾಝ್ ಖಾನ್ ಮತ್ತು ಲಿಯಾಖತ್ ಹುಸೇನ್ ಸಲ್ಲಿಸಿದ್ದ ಮೇಲ್ಮನವಿಗಳನ್ನು ನ್ಯಾಯಮೂರ್ತಿ ರವಿ ಮಳೀಮಠ ಹಾಗೂ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹ ಅರಿದ್ದ ವಿಭಾಗೀಯ ಪೀಠ ವಜಾ ಮಾಡಿದೆ.
ತನಿಖೆ ವೇಳೆ ಆರೋಪಿಗಳಿಂದ 34 ಲಕ್ಷ ನಗದು ಹಾಗೂ 9 ಕೋಟಿ ಮೌಲ್ಯದ ನಕಲಿ ಛಾಪಾ ಕಾಗದ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿತ್ತು.
ಅಲ್ಲದೆ, ನಕಲಿ ಛಾಪಾ ಕಾಗದ ಮುದ್ರಣ ಮಾಡುತ್ತಿದ್ದೇವೆ ಎಂಬ ಸಂಗತಿ ಅರಿವಿದ್ದರೂ, ಆರೋಪಿಗಳು ಕಾನೂನು ಬಾಹಿರ ಕೆಲಸದಲ್ಲಿ ನಿರತರಾಗಿದ್ದರು. ಇಡೀ ಹಗರಣದಲ್ಲಿ ದೇಶದ ಬೊಕ್ಕಸಕ್ಕೆ 25 ಸಾವಿರ ಕೋಟಿ ನಷ್ಟವಾಗಿರುವುದು ತನಿಖೆ ವೇಳೆ ಕಂಡು ಬಂದಿದೆ ಎಂದು ಸಿಬಿಐ ಆರೋಪಿಸಿತ್ತು.