×
Ad

ಪರಧರ್ಮ ಸಹಿಷ್ಣುತೆ ಶಾಂತಿಯ ದ್ಯೋತಕ: ಮುನವ್ವರ್ ಹುಸೈನ್‌

Update: 2017-07-15 17:49 IST

ಬೆಂಗಳೂರು, ಜು. 15: ಅನ್ಯ ಧರ್ಮಿಯರ ನಡುವೆ ಪರಸ್ಪರ ಹೊಂದಾಣಿಕೆ ಮತ್ತು ಪರಧರ್ಮ ಸಹಿಷ್ಣುತೆಯಿಂದ ಸಮಾಜದಲ್ಲಿ ಶಾಂತಿ ಸಾಮರಸ್ಯವನ್ನು ಕಾಪಾಡಬಹುದು ಎಂದು ನಗರದ ರೆಹಮಾನ್ ಮಸ್ಜೀದ್‌ನ ಮೌಲಿ ಮುನವರ್ ಹುಸೈನ್ ಅಭಿಪ್ರಾಯಪಟ್ಟಿದ್ದಾರೆ.ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಲೇಖಕ ಮೋಹನ್ ಅವರ ಆಂಗ್ಲ ಭಾಷೆಯ ‘ವಿಶ್ವಗುರು’ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ವಿಶ್ವದ ಎಲ್ಲ ಧರ್ಮಗಳು ಶಾಂತಿ ಮತ್ತು ನೆಮ್ಮದಿಯನ್ನು ಪ್ರತಿಪಾದಿಸುತ್ತವೆ. ಮಾನವನ ಒಳಿತಿಗಾಗಿ ಎಲ್ಲ ಧರ್ಮಗಳು ರೂಪಿತಗೊಂಡಿವೆ. ಇದನ್ನು ಅರಿತು ಅನ್ಯ ಧರ್ಮಿಯರ ಜೊತೆ ಹೊಂದಾಣಿಕೆಯ ಜೀವನದಿಂದ ಶಾಂತಿ ನೆಲೆಸಲಿದೆ ಎಂದು ತಿಳಿಸಿದರು. ಭಗವಂತ ಹಾಗೂ ಸೃಷ್ಟಿಯ ರಹಸ್ಯ ಕುರಿತು ಪುಸ್ತಕದಲ್ಲಿ ವಿವರಿಸಲಾಗಿದೆ. ಈ ಕೃತಿಯಲ್ಲಿ ಎಲ್ಲ ಧರ್ಮಗಳ ಶಾಂತಿ ರೂಪಕವಾಗಿದೆ. ಪ್ರತಿಯೊಬ್ಬರು ಈ ಪುಸ್ತಕವನ್ನು ಓದುಬೇಕು ಎಂದು ತಿಳಿಸಿದರು.

ವಿದ್ವಾಂಸ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಮಾತನಾಡಿ, ವಿಶ್ವದ ಎಲ್ಲ ಹಿಂದೂಗಳು, ಯಹೂದಿಗಳು, ಕ್ರಿಶ್ಚಿಯನ್ನರು, ಮುಸ್ಲಿಮರು, ಬೌದ್ಧರು, ಭಗವಂತನ ರಹಸ್ಯವನ್ನು ಯಾರಾದರೂ ತಿಳಿಸುವರೇ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಈ ಕಾತರಕ್ಕೆ ಈ ಕೃತಿ ಪರಿಹಾರವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಸುಶೀಲಮ್ಮ, ಸ್ಟೀಫನ್ ಚರ್ಚ್‌ನ ಮನೋಹರ್ ಚಂದ್ರಪ್ರಸಾದ್, ಬರಹಗಾರ ಎಂ.ವಿ. ತ್ಯಾಗರಾಜ್, ಕ್ರಿಸ್ಪ್ ಸಂಸ್ಥೆಯ ಅಧ್ಯಕ್ಷ ಕುಮಾರ್ ಜಾಗೀರ್ದಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News