×
Ad

‘ಹಕ್ಕುಚ್ಯುತಿ’ ಮಂಡಿಸಲು ಪರಿಷತ್ ಸದಸ್ಯರ ಕೋರಿಕೆ: ಸಭಾಪತಿ ಶಂಕರಮೂರ್ತಿ

Update: 2017-07-15 17:54 IST

ಬೆಂಗಳೂರು, ಜು. 15: ಪ್ರಯಾಣ ಭತ್ತೆ ದುರ್ಬಳಕೆ ಪ್ರಕರಣ ಸಂಬಂಧ ‘ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ’ ಎಂದು 8 ಮಂದಿ ಪರಿಷತ್ ಸದಸ್ಯರು ದೂರು ನೀಡಿರುವ ಪದ್ಮನಾಭರೆಡ್ಡಿ ವಿರುದ್ಧ ‘ಹಕ್ಕುಚ್ಯುತಿ’ ಮಂಡನೆಗೆ ಅವಕಾಶ ಕೋರಿದ್ದಾರೆಂದು ಸಭಾಪತಿ ಡಿ.ಎಚ್.ಶಂಕರಮೂರ್ತಿ ತಿಳಿಸಿದ್ದಾರೆ.

ಶನಿವಾರ ವಿಧಾನಸೌಧದಲ್ಲಿನ ತನ್ನ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಯಾಣ ಭತ್ತೆ ದುರ್ಬಳಕೆ ಸಂಬಂಧದ ದೂರಿನ ಹಿನ್ನೆಲೆಯಲ್ಲಿ ರಾಜ್ಯದ ಅಡ್ವೋಕೇಟ್ ಜನರಲ್ ಸೇರಿದಂತೆ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಹೇಳಿದರು. ಬಿಬಿಎಂಪಿ ವಿಪಕ್ಷ ನಾಯಕ ಪದ್ಮನಾಭರೆಡ್ಡಿ, ಮೇಲ್ಮನೆ ಸದಸ್ಯರಾದ ಮನೋಹರ್, ರಘು ಆಚಾರ್, ಆರ್.ಬಿ.ತಿಮ್ಮಾಪುರ್, ಎಂ.ಡಿ.ಲಕ್ಷ್ಮಿನಾರಾಯಣ್, ಅಲ್ಲಂ ವೀರಭದ್ರಪ್ಪ, ಅಪ್ಪಾಜಿಗೌಡ, ಎಸ್.ರವಿ, ಎನ್.ಎಸ್.ಬೋಸರಾಜ್ ಸೇರಿದಂತೆ ಎಂಟು ಮಂದಿಯ ವಿರುದ್ಧ ದೂರು ನೀಡಿದ್ದಾರೆ.

ಮೇಲ್ಕಂಡ 8 ಮಂದಿ ಸದಸ್ಯರು ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ವಿಳಾಸ ಬದಲಾವಣೆ ಮಾಡಿಕೊಂಡಿದ್ದಾರೆ. ಆದರೆ, ತಮ್ಮ ಕ್ಷೇತ್ರಗಳಿಂದಲೂ ಪ್ರಯಾಣ ಭತ್ತೆಯನ್ನು ಪಡೆದಿದ್ದಾರೆ. ಇದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಉಲ್ಲಂಘನೆಯಾಗಿದೆ. ಆದುದರಿಂದ ಕ್ರಮ ಕೈಗೊಳ್ಳಬೇಕೆಂದು ಪದ್ಮನಾಭರೆಡ್ಡಿ ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ ದೂರನ್ನು ಆಧರಿಸಿ ಎಂಟು ಮಂದಿ ಸದಸ್ಯರಿಗೆ ಪತ್ರ ಬರೆದಿದ್ದೆ. ಅವರು ಕಾಲಾವಕಾಶ ಕೋರಿದ್ದರು. ಆ ಬಳಿಕ ಎಂಟು ಮಂದಿಯೂ ಲಿಖಿತ ಉತ್ತರ ನೀಡಿದ್ದು, ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಪದ್ಮನಾಭರೆಡ್ಡಿ ತಮ್ಮ ವಿರುದ್ಧ ಸುಳ್ಳು ದೂರು ನೀಡಿ ‘ಹಕ್ಕುಚ್ಯುತಿ’ಯನ್ನುಂಟು ಮಾಡಿದ್ದು ಮೇಲ್ಮನೆಯಲ್ಲಿ ಹಕ್ಕುಚ್ಯುತಿ ಮಂಡಿಸಲು ಅವಕಾಶ ಕೋರಿ ಮನವಿ ಮಾಡಿದ್ದಾರೆ ಎಂದು ವಿವರ ನೀಡಿದರು.

ವಿಳಾಸ ಬದಲಾವಣೆ ನಂತರ ಸ್ವಕ್ಷೇತ್ರದಿಂದ ಪ್ರಯಾಣ ಭತ್ತೆ ಪಡೆದಿರುವುದು ಕಾನೂನಾತ್ಮಕವಾಗಿ ಸರಿ ಇರಬಹುದು. ಆದರೆ, ನೈತಿಕವಾಗಿ ತಪ್ಪಿದೆ. ತಾವು ಬಳಸಿರುವ ಪ್ರಯಾಣ ಭತ್ತೆ ವಾಪಸ್ ಮಾಡುತ್ತೇವೆ ಎಂದು 8ಮಂದಿ ವಾದ ಮಂಡಿಸುವ ಜಿಜ್ಞಾಸೆ ಇದೆ. ಈ ಪ್ರಕರಣ ಅತ್ಯಂತ ಸೂಕ್ಷ್ಮ-ಸಂಕೀರ್ಣ. ಹೀಗಾಗಿ ಪರಿಶೀಲಿಸಿ ತೀರ್ಮಾನಿಸಲಾಗುವುದು ಎಂದರು.

ಆಂಧ್ರದ ರಾಜ್ಯಪಾಲರಾಗಿ ಮೂರ್ತಿ? ರಾಷ್ಟ್ರಪತಿ ಚುನಾವಣೆ ಬಳಿಕ ರಾಜ್ಯಪಾಲ ಹುದ್ದೆ ಸಂಬಂಧ ಹೊಸದಿಲ್ಲಿ ನಾಯಕರು ಸಮಾಲೋಚನೆ ನಡೆಸುವ ಸಾಧ್ಯತೆಗಳಿವೆ. ತಮ್ಮನ್ನು ಆಂಧ್ರ ರಾಜ್ಯಪಾಲರನ್ನಾಗಿ ನೇಮಿಸಲಾಗುತ್ತದೆ ಎಂದು ಸುದ್ದಿ ಬಿತ್ತರವಾಗಿದ್ದು, ಇದರಲ್ಲಿ ಭಾಗಶಃ ಸತ್ಯಾಂಶವಿದೆ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News