ಕೈದಿಗಳಿಗೆ ‘ರೇವು ಪಾರ್ಟಿ ಭಾಗ್ಯ’ ಕಲ್ಪಿಸಿ: ಆರ್.ಅಶೋಕ್ ಬೇಡಿಕೆ
ಬೆಂಗಳೂರು, ಜು. 15: ರಾಜ್ಯದ ಜನತೆಗೆ ಹಲವು ‘ಭಾಗ್ಯ’ಗಳನ್ನು ಕಲ್ಪಿಸಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕಾರಾಗೃಹ ಬಂಧಿ ಹಾಗೂ ಕೈದಿಗಳಿಗೆ ಇಸ್ಪೀಟ್, ಮದ್ಯ, ಮಾದಕ ದ್ರವ್ಯಗಳು ಹಾಗೂ ರೇವು ಪಾರ್ಟಿಯ ಭಾಗ್ಯಗಳನ್ನು ಕಲ್ಪಿಸಬೇಕೆಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ವಿಚಿತ್ರ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ಶನಿವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೈಲಿನಲ್ಲಿ ಮದ್ಯ, ಮಾದಕ ದ್ರವ್ಯಗಳು ರಾಜಾರೋಷವಾಗಿ ಪೂರೈಕೆಯಾಗುತ್ತಿದ್ದು, ಕಾರಾಗೃಹಗಳು ಒಂದು ರೀತಿಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್‌ಗಳಾಗಿ ಮಾರ್ಪಟ್ಟಿವೆ ಎಂದು ಟೀಕಿಸಿದರು.
ನ್ಯಾಯಾಂಗ ತನಿಖೆ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಸಂಬಂಧ ಹೈಕೋರ್ಟಿನ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದ ಅವರು, ಶಶಿಕಲಾಗೆ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಲು 2 ಕೋಟಿ ರೂ.ಲಂಚ ಪಡೆದಿರುವ ಸಂಬಂಧ ಡಿಐಜಿ ರೂಪಾ ಪತ್ರ ಬರೆದಿದ್ದಾರೆ. ಈ ಪ್ರಕರಣದ ಸತ್ಯಾಂಶ ಬೆಳಕಿಗೆ ಬರಬೇಕಿದೆ ಎಂದರು. ಪೊಲೀಸ್ ಇಲಾಖೆಯಲ್ಲಿ ನಿಷ್ಠಾವಂತ ಅಧಿಕಾರಿಗಳಿಗೆ ಅನಗತ್ಯ ಕಿರುಕುಳ, ವರ್ಗಾವಣೆಯ ಬಳುವಳಿ ನೀಡಲಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಸೋನಿಯಾ ನಾರಂಗ್ ಸೇರಿ ಹಲವು ಅಧಿಕಾರಿಗಳು ಕಿರುಕುಳ ಅನುಭವಿಸಿದ್ದಾರೆ ಎಂದು ಟೀಕಿಸಿದರು.
ದೇಶದಲ್ಲೆ ಕರ್ನಾಟಕದ ಪೊಲೀಸರಿಗೆ ಅಪಾರ ಗೌರವವಿತ್ತು. ಆದರೆ, ಇದೀಗ ಹಿರಿಯ ಪೊಲೀಸ್ ಅಧಿಕಾರಿಗಳಿಬ್ಬರ ಬಹಿರಂಗ ಕಚ್ಚಾಟದಿಂದ ಅದು ಮಣ್ಣು ಪಾಲಾಗುತ್ತಿದೆ. ಕಾರಾಗೃಹದ ವೈದ್ಯರು ಅಲ್ಲಿನ ಬೆಳವಣಿಗೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಅವರಿಗೂ ಭದ್ರತೆ ಸಮಸ್ಯೆಯಿದೆ ಎಂದು ವಾಗ್ದಾಳಿ ನಡೆಸಿದರು.