×
Ad

ನಕಲಿ ಕ್ರೆಡಿಟ್ ಕಾರ್ಡ್ ವಂಚನೆ ಪ್ರಕರಣ: ಶ್ರೀಲಂಕಾ ಪ್ರಜೆ ಸೇರಿ ಮೂವರ ಸೆರೆ

Update: 2017-07-15 18:08 IST

ಬೆಂಗಳೂರು, ಜು.15: ವಿದೇಶದ ಮೂಲ ಕ್ರೆಡಿಟ್‌ ಕಾರ್ಡ್‌ದಾರರ ಹಣಕಾಸಿನ ಮಾಹಿತಿ ಪಡೆದು ನಕಲಿ ಕ್ರೆಡಿಟ್ ಕಾರ್ಡ್‌ಗಳನ್ನು ತಯಾರಿಸಿ ಆನ್‌ಲೈನ್ ಮೂಲಕ ವಂಚನೆ ಮಾಡುತ್ತಿದ್ದ ಪ್ರಕರಣ ಸಂಬಂಧ ಶ್ರೀಲಂಕಾ ಪ್ರಜೆ ಸೇರಿ ಮೂವರನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಶ್ರೀಲಂಕಾದ ಜಾಫ್ನಾ ಮೂಲದ ದಿವ್ಯನ್ ಯಾನೆ ಥಾಮಸ್ (31), ಕನಕನಗರದ ನವಾಝ್ ಶರೀಫ್ (22), ಎಚ್‌ಬಿಆರ್ ಲೇಔಟ್‌ನ ನದೀಮ್ ಶರೀಫ್ (30) ಬಂಧಿತ ಆರೋಪಿಗಳೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧ ಶನಿವಾರ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಪ್ರವೀಣ್‌ಸೂದ್, ಆರೋಪಿ ದಿವ್ಯನ್ ಸ್ನೇಹಿತ ಟಾಮ್‌ಜೊ ಎಂಬುವನ ಹೆಸರಿಗೆ ದುಬಾರಿ ಬಾಡಿಗೆಗೆ ಜಾಲಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮನೆಯನ್ನು ಪಡೆದುಕೊಂಡು ದಂಧೆ ನಡೆಸುತ್ತಿದ್ದರು. ಅಮೆರಿಕ-ಜಪಾನ್ ಸೇರಿ ವಿದೇಶಗಳಲ್ಲಿ ನೆಲೆಸಿರುವ ಮೂಲ ಕ್ರೆಡಿಟ್‌ಕಾರ್ಡ್‌ದಾರರ ಹಣಕಾಸಿನ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಅಕ್ರಮವಾಗಿ ಪಡೆದು ಅವುಗಳಿಂದ ಅಮೆಜಾನ್ ಸೇರಿ ಇನ್ನಿತರ ವೆಬ್‌ಸೈಟ್ ಮೂಲಕ ಖಾಲಿ ಮ್ಯಾಗ್ನೆಟಿಕ್ ಸ್ವೈಪ್‌ಕಾರ್ಡ್‌ಗಳನ್ನು ಪಡೆದುಕೊಳ್ಳುತ್ತಿದ್ದರು ಎಂದು ಮಾಹಿತಿ ನೀಡಿದರು.

ಆರೋಪಿಗಳಿಂದ ವಿವಿಧ ಬ್ಯಾಂಕುಗಳಿಗೆ ಸೇರಿದ 144 ಕ್ರೆಡಿಟ್‌ಕಾರ್ಡ್‌ಗಳು, 36 ಹೊರ ರಾಜ್ಯದ ಅಂಗಡಿಗಳ 36 ಕಾರ್ಡ್ ಸ್ವೈಪಿಂಗ್ ಮಿಷನ್‌ಗಳು, 16 ನಕಲಿ ಡ್ರೈವಿಂಗ್ ಲೈಸೆನ್ಸ್‌ಗಳು, ಲ್ಯಾಪ್‌ಟಾಪ್ ಇನ್ನಿತರ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರವೀಣ್ ಸೂದ್ ತಿಳಿಸಿದರು.

ಜಮೆಯಾದ ಹಣದ ಶೇ.20ರಷ್ಟನ್ನು ಏಜೆಂಟರುಗಳ ಮೂಲಕ ಪಡೆದು ಐಷಾರಾಮಿ ಜೀವನ ನಡೆಸುತ್ತಿದ್ದರು. ಆರೋಪಿ ದಿವ್ಯನ್ ಜಾಫ್ನಾದಿಂದ ಅಕ್ರಮವಾಗಿ ಚೆನ್ನೈಗೆ ಬಂದಿದ್ದು, ಆತನ ವಿರುದ್ಧ 2 ವಂಚನೆ ಕೇಸುಗಳು ಪ್ರಕರಣ ದಾಖಲಾಗಿವೆ ಶ್ರೀಲಂಕಾ ಪೊಲೀಸರಿಗೆ ಮಾಹಿತಿ ರವಾನಿಸಲಾಗಿದೆ ಎಂದರು.

ಆರೋಪಿ ನದೀಮ್ ಈ ಹಿಂದೆ ಕಾಟನ್‌ಪೇಟೆ, ಉಪ್ಪಾರಪೇಟೆ ಹಾಗೂ ಮುಂಬೈನಲ್ಲಿ ಹಲವು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಆರೋಪಿಗಳು ಹೊರ ದೇಶದವರಿಗೆ ವಂಚನೆ ನಡೆಸುತ್ತಿರುವುದರಿಂದ ರಾಜ್ಯಕ್ಕೆ ಬಂದು ದೂರು ನೀಡುವುದು ಸಾಧ್ಯವಾಗಿಲ್ಲ. ಇದರಿಂದ ಆರೋಪಿಗಳು ಬಚಾವ್ ಆಗುತ್ತಿದ್ದರು. ಇತ್ತೀಚಿಗೆ ಆರೋಪಿಗಳು ದೊಡ್ಡಕಲ್ಲಸಂದ್ರದ ವಿಷ್ಣುಪ್ರಿಯ ಇಂಟರ್ ನ್ಯಾಷನಲ್ ಅಂಗಡಿಯಲ್ಲಿ ಬಳಸಿ 3 ಎಲ್‌ಇಡಿ ಟಿವಿಗಳನ್ನು ಖರೀದಿಸಿ 1.10 ಲಕ್ಷ ರೂ.ಜಮೆ ಮಾಡಿರಲಿಲ್ಲ. ಈ ಸಂಬಂಧ ಬಂದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ರವಿ, ಡಿಸಿಪಿ ಡಾ. ರಾಮ್‌ನಿವಾಸ್ ಸೇರಿ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News