×
Ad

ಜೈಲುಗಳಲ್ಲಿನ ಅಕ್ರಮಗಳಿಗೆ ಅಧಿಕಾರಿಗಳೇ ಹೊಣೆ: ಡಾ.ಜಿ.ಪರಮೇಶ್ವರ್

Update: 2017-07-15 19:45 IST

ಬೆಂಗಳೂರು, ಜು.15: ಜೈಲುಗಳಲ್ಲಿ ಯಾವುದೆ ರೀತಿಯ ಅಕ್ರಮಗಳು, ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟರೆ, ಅದಕ್ಕೆ ಸಂಬಂಧಪಟ್ಟ ಆಯಾ ಜೈಲುಗಳ ಅಧೀಕ್ಷಕರೇ ಹೊಣೆಯಾಗುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಮಾಜಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಶನಿವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಲಂಚ ಪಡೆದು ನಕಲಿ ಛಾಪಾ ಕಾಗದ ಹಗರಣದ ರೂವಾರಿ ಕರೀಂಲಾಲ್ ತೆಲಗಿ ಹಾಗೂ ತಮಿಳುನಾಡಿನ ಶಶಿಕಲಾಗೆ ವಿಶೇಷ ಆತಿಥ್ಯ ನೀಡಲಾಗುತ್ತಿದೆ ಎಂಬ ಆರೋಪದ ಕುರಿತು ಈಗಾಗಲೆ ಮುಖ್ಯಮಂತ್ರಿ ತನಿಖೆಗೆ ಆದೇಶ ನೀಡಿದ್ದಾರೆ ಎಂದರು.

ಕರೀಂಲಾಲ್ ತೆಲಗಿ ಹಲವು ವರ್ಷಗಳಿಂದ ಜೈಲಿನಲ್ಲಿದ್ದಾರೆ. ನಾನು ಗೃಹ ಸಚಿವನಾಗಿದ್ದ ಸಂದರ್ಭದಲ್ಲೆ ಶಶಿಕಲಾ ಜೈಲು ಪಾಲಾಗಿದ್ದು. ಮಾಧ್ಯಮಗಳಲ್ಲಿ ವರದಿಯಾದಂತೆ ಜೈಲಿನಲ್ಲಿ ಕಾನೂನು ಬಾಹಿರವಾಗಿ ಯಾವದೇ ಚಟುವಟಿಕೆಗಳು ನಡೆದಿದ್ದರೂ ಅದಕ್ಕೆ ಆಯಾ ಜೈಲುಗಳ ಅಧೀಕ್ಷಕರೆ ಹೊಣೆಯಾಗುತ್ತಾರೆ ಎಂದು ಅವರು ಹೇಳಿದರು.

ಬಿಜೆಪಿ ನಾಯಕ ಆರ್.ಅಶೋಕ್ ಗೃಹ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಅವರ ಅಧಿಕಾರವಧಿಯಲಿ ಎಂತಹ ಪ್ರಕರಣಗಳು ನಡೆಯಿತು. ಯಾವ ರೀತಿಯ ವರದಿಗಳನ್ನು ಯಾರಿಂದ ತನಿಖೆ ನಡೆಸಿ ಪಡೆದುಕೊಂಡಿದ್ದಾರೆ ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಪರಮೇಶ್ವರ್ ತಿರುಗೇಟು ನೀಡಿದರು.
ತಪ್ಪು ಯಾರು ಮಾಡಿದ್ದರೂ ಅದು ತಪ್ಪು. ಮುಖ್ಯಮಂತ್ರಿ ಈ ಪ್ರಕರಣದ ನಿವೃತ್ತ ಐಎಎಸ್ ಅಧಿಕಾರಿ ವಿನಯ್‌ಕುಮಾರ್ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆಗೆ ಆದೇಶಿಸಿದ್ದಾರೆ. ವರದಿ ಬಂದ ಬಳಿಕ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು.

ಶೋಭಾ ದಲಿತರನ್ನು ವಿವಾಹವಾಗಲಿ; ನನಗೆ ಹಾಗೂ ದಿನೇಶ್‌ಗುಂಡೂರಾವ್‌ಗೆ ದಲಿತರನ್ನು ಮದುವೆಯಾಗುವಂತೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಆದರೆ, ಈಗಾಗಲೆ ನಾವು ಮದುವೆಯಾಗಿ ಹಲವಾರು ವರ್ಷಗಳೇ ಕಳೆದಿವೆ. ಈಗ ಅವಕಾಶವಿರುವುದು ಶೋಭಾ ಕರಂದ್ಲಾಜೆಗೆ ಮಾತ್ರ. ಯಾರಾದರೂ ಒಬ್ಬ ದಲಿತನನ್ನು ಆಯ್ಕೆ ಮಾಡಿಕೊಂಡು ಅವರು ಮದುವೆಯಾಗಲಿ ಎಂದು ಪರಮೇಶ್ವರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News