ರಾಜ್ಯಕ್ಕೆ ಬೆಂಕಿ ಹಚ್ಚುವ ಬೆದರಿಕೆ: ಯಡಿಯೂರಪ್ಪ ವಿರುದ್ಧ ದೂರು ದಾಖಲು
ಬೆಂಗಳೂರು, ಜು. 15: ‘ಕಲ್ಲಡ್ಕ ಪ್ರಭಾಕರ್ ಭಟ್ರನ್ನ ಬಂಧಿಸಿದರೆ ರಾಜ್ಯಕ್ಕೆ ಬೆಂಕಿ ಬೀಳುತ್ತದೆ’ ಎಂದು ಸಂಸದ, ಮಾಜಿ ಸಿಎಂ ಯಡಿಯೂರಪ್ಪ ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕ ಹಾಗೂ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ.
ಶನಿವಾರ ಸಂಜೆ ವಿಧಾನಸೌಧಕ್ಕೆ ಆಗಮಿಸಿದ ಸಾಮಾಜಿಕ ಹೋರಾಟಗಾರ ಹನುಮೇಗೌಡ ಎಂಬವರು, ಪ್ರಚೋದನಕಾರಿ ಹೇಳಿಕೆ ನೀಡಿದ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ದೂರು ನೀಡಿದ್ದು, ಭಾರತೀಯ ದಂಡ ಸಂಹಿತೆ 153 ಹಾಗೂ 436ರ ಅನ್ವಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿದರು.
ದಕ್ಷಿಣ ಕನ್ನಡ ಜಿಲ್ಲೆ ಕೋಮು ದಳ್ಳುರಿಗೆ ಸಿಲುಕಿ ಉದ್ವಿಗ್ನ ಪರಿಸ್ಥಿತಿಗೆ ತಲುಪಿದ್ದು, ಯಡಿಯೂರಪ್ಪರ ಪ್ರಚೋದನಕಾರಿ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸದೆ ಇರುವುದರಿಂದ ಮುಂದೆ ರಾಜ್ಯವೇ ಕೋಮು ಗಲಭೆಗೆ ಕಾರಣವಾದರೆ ಅದಕ್ಕೆ ರಾಜ್ಯ ಸರಕಾರ ಹಾಗೂ ಪೊಲೀಸ್ ಇಲಾಖೆ ಹೊಣೆ ಹೊರಬೇಕಾಗುತ್ತದೆ ಎಂದು ದೂರಿನಲ್ಲಿ ಎಚ್ಚರಿಸಲಾಗಿದೆ.
ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದು ಜನತೆ ಹಿತಕ್ಕಾಗಿಯೇ ಹೊರತು, ಸ್ವಾರ್ಥ ಸಾಧನೆ, ಸ್ವಹಿತಾಸಕ್ತಿ, ಪಕ್ಷಪಾತಕ್ಕಲ್ಲ ಎನ್ನುವ ಸಾಮಾನ್ಯ ಜ್ಞಾನವೇ ಇಲ್ಲದಂತೆ ನಡೆದುಕೊಳ್ಳುವ ಸಂಸದರು, ಪ್ರಜಾಪ್ರಭುತ್ವದ ಆಧಾರದ ಮೇಲೆ ಶಾಸನ ರೂಪಿಸುವ ಇವರೇ ಕಾನೂನು ವಿರೋಧಿ ನಡವಳಿ ಸರಿಯಲ್ಲ ಎಂದು ದೂರಿನಲ್ಲಿ ಆಕ್ಷೇಪಿಸಲಾಗಿದೆ.
ಯಾವುದೇ ರಾಜಕೀಯ ಪಕ್ಷವಾದರೂ ರಾಜ್ಯದ ಹಿತ, ಜನಹಿತ ಕಾಪಾಡಬೇಕು. ಆದರೆ, ರಾಜಕೀಯ ಪಕ್ಷದ ನಾಯಕರೆ, ಒಬ್ಬ ವ್ಯಕ್ತಿಯ ಹಿತಕ್ಕಾಗಿ ರಾಜ್ಯದ ಜನತೆಯ ಹಿತಕ್ಕೆ ಬೆಂಕಿ ಇಡಲು ಪ್ರಚೋದಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳದಿರುವುದು ಪ್ರಜಾಪ್ರಭುತ್ವದ ಸರಕಾರಕ್ಕೆ ಅಪಮಾನ. ಮಾತ್ರವಲ್ಲ, ಪ್ರಜಾತಂತ್ರದ ಕಗ್ಗೊಲೆ ಎಂದು ತಿಳಿಸಲಾಗಿದೆ.
ಈ ಹಿಂದೆ ಸಂಸದ ನಳಿನ್ ಕುಮಾರ್ ಕಟೀಲ್ ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚುವುದು ಗೊತ್ತಿದೆ ಎಂದು ಹೇಳಿಕೆ ಕೊಟ್ಟಿದ್ದರು. ಆ ಮೂಲಕ ಸರಕಾರಕ್ಕೆ ಬೆದರಿಕೆ ಹಾಕಿದ್ದರು. ಆದರೆ, ರಾಜ್ಯ ಸರಕಾರ ಅಸಹಾಯಕತೆಯಿಂದಲೂ, ಪಕ್ಷಪಾತದಿಂದಲೂ, ಕರ್ತವ್ಯ ನಿರ್ಲಕ್ಷ ತೋರಿ ವೌನಕ್ಕೆ ಶರಣಾದ ಕಾರಣ, ಇದೀಗ ಮತ್ತೊಮ್ಮೆ ಅಂತಹದ್ದೆ ಧ್ವನಿ ಮೊಳಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.