ವಿದ್ಯುತ್ ನಿಗಮಗಳ ಸಿಬ್ಬಂದಿ ವೇತನ ಪರಿಷ್ಕರಣೆಗೆ ಕ್ರಮ: ಡಿ.ಕೆ.ಶಿವಕುಮಾರ್
ಬೆಂಗಳೂರು, ಜು.15: ರಾಜ್ಯದ ವಿದ್ಯುತ್ ನಿಗಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ವೇತನ ಪರಿಷ್ಕರಣೆಗಾಗಿ ಸಮಿತಿ ರಚನೆ ಮಾಡಲಾಗಿದ್ದು, ವರದಿ ಬಂದ ತಕ್ಷಣ ಅದನ್ನು ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.ಶನಿವಾರ ನಗರದ ಅರಮನೆ ಮೈದಾನದಲ್ಲಿರುವ ಗಾಯತ್ರಿ ವಿಹಾರದಲ್ಲಿ ರಾಜ್ಯ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ತ್ರೈ ಮಾಸಿಕ ಮಹಾಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರೊಬೇಷನರಿ ಅವಧಿಯಲ್ಲಿ ಮೃತಪಟ್ಟ ಸಿಬ್ಬಂದಿಗಳ ಕುಟುಂಬಕ್ಕೆ ಉದ್ಯೊಗ ನೀಡಲು ಯೋಜನೆ ರೂಪಿಸಲಾಗುತ್ತಿದೆ. ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಸಿಬ್ಬಂದಿಯ ಕುಟುಂಬಗಳಿಗೆ ಈ ಹಿಂದೆ ನೀಡಲಾಗುತ್ತಿದ್ದ ಪರಿಹಾರದ ಮೊತ್ತವನ್ನು ನಮ್ಮ ಸರಕಾರ 2 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಿದೆ ಎಂದು ಅವರು ಹೇಳಿದರು.
ವಿದ್ಯುತ್ ಸರಬರಾಜು ಮಾಡುತ್ತಿರುವ ಕಂಪೆನಿಗಳನ್ನು ಖಾಸಗಿಕರಣ ಮಾಡುವಂತೆ ಹಲವಾರು ಸಲಹೆಗಳು ಬರುತ್ತಿವೆ. ಆದರೆ, ನನ್ನ ಅಧಿಕಾರವಧಿಯಲ್ಲಿ ಯಾವುದೆ ಕಾರಣಕ್ಕೂ ವಿದ್ಯುತ್ ಕಂಪೆನಿಗಳು ಖಾಸಗೀಕರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಶಿವಕುಮಾರ್ ತಿಳಿಸಿದರು.
ಇಂಧನ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಹಾಗೂ ಅಂಗವಿಕಲರಿಗೆ ಸೇವಾ ಭದ್ರತೆ ಒದಗಿಸುವಂತೆ ಬೇಡಿಕೆ ಬಂದಿದೆ. ನ್ಯಾಯಾಲಯದಲ್ಲಿ ಈ ಸಂಬಂಧ ಯಾವುದೇ ರೀತಿಯ ಅಡೆತಡೆಗಳು ಎದುರಾಗದಿದ್ದಲ್ಲಿ ಅಂತಹವರಿಗೆ ಸೇವಾ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.
ಮಲೆನಾಡು ಹೊರತುಪಡಿಸಿ ರಾಜ್ಯದ ಎಲ್ಲ ತಾಲೂಕುಗಳಲ್ಲಿ ಸ್ಥಳೀಯವಾಗಿ 150 ಯೂನಿಟ್ ವಿದ್ಯುತ್ ಉತ್ಪಾದನೆ ಮಾಡುವ ಕಿರು ಯೋಜನೆಗಳನ್ನು ಮುಂದಿನ ಒಂದು ವರ್ಷದಲ್ಲಿ ಜಾರಿಗೆ ತರಲಾಗುವುದು. ಅಲ್ಲದೆ, ಲೈನ್‌ಮೆನ್‌ಗಳ ಹೆಸರು ಬದಲಾಯಿಸುವಂತೆ ಬಂದಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.
ಇಂಧನ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರನ್ನು ಗುರುತಿಸಿ, ಆಗಸ್ಟ್ ತಿಂಗಳಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸನ್ಮಾನ ಮಾಡಲಾಗುವುದು. ಇಂಧನ ಇಲಾಖೆಯ ಜವಾಬ್ದಾರಿವಹಿಸಿಕೊಂಡರೆ ಜನಪ್ರಿಯತೆಗಳಿಸಲು ಸಾಧ್ಯವಿಲ್ಲ ಎಂದು ಹಲವರು ಹೇಳಿದ್ದರು. ಆದರೆ, ಇದನ್ನು ಸವಾಲಾಗಿ ಸ್ವೀಕರಿಸಿ ಮುಂದುವರೆದಿದ್ದೇನೆ. ಮುಖ್ಯಮಂತ್ರಿಯು ನನ್ನ ಕೆಲಸಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು.
ಇಂಧನ ಇಲಾಖೆಯಲ್ಲಿ ಖಾಲಿಯಿದ್ದ 30 ಸಾವಿರ ಹುದ್ದೆಗಳ ಪೈಕಿ ಈಗಾಗಲೆ 22 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಇನ್ನುಳಿದ 8 ರಿಂದ 9 ಸಾವಿರ ಹುದ್ದೆಗಳನ್ನು ಮುಂದಿನ ಎರಡು ತಿಂಗಳಲ್ಲಿ ಭರ್ತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಿವಕುಮಾರ್ ತಿಳಿಸಿದರು.
ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ, ರಾಜ್ಯ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಅಮ್ಮಿನಭಾವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.