ಭ್ರಷ್ಟಾಚಾರ ನಿರ್ಮೂಲನೆಗೆ ಜನರ ಪಾತ್ರ ದೊಡ್ಡದು: ಡಾ.ಎಸ್.ಆರ್.ನಾಯಕ್
ಬೆಂಗಳೂರು, ಜು.16: ಭ್ರಷ್ಟರನ್ನು ಮಟ್ಟ ಹಾಕುವಂತಹ ಸಂಘ-ಸಂಸ್ಥೆಗಳ ಜೊತೆ ಜನಸಾಮಾನ್ಯರು ಕೈಜೋಡಿಸಬೇಕು ಎಂದು ರಾಜ್ಯ ಕಾನೂನು ಆಯೋಗದ ಅಧ್ಯಕ್ಷ, ನಾಡೋಜ ಡಾ.ಎಸ್.ಆರ್.ನಾಯಕ್ ತಿಳಿಸಿದ್ದಾರೆ.
ರವಿವಾರ ಮಾನವ ಹಕ್ಕುಗಳ ಹಿತರಕ್ಷಣಾ ವೇದಿಕೆ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಮಾನವ ಹಕ್ಕುಗಳ ಕುರಿತ ವಿಚಾರ ಸಂಕಿರಣ ಹಾಗೂ ಜನಪರ ಎನ್‌ಜಿಒಗಳಿಗೆ ಪ್ರಶಸ್ತಿ ಪ್ರದಾನ ಮಾಡುವ ಮಾಡಿ ಅವರು ಮಾತನಾಡಿದರು.
ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದರ ಮಾತ್ರ ಮಾನವ ಹಕ್ಕುಗಳು ಉಲ್ಲಂಘನೆ ತಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ರಾಜ್ಯದ ಹಲವು ಸಂಘ, ಸಂಸ್ಥೆಗಳು ಭ್ರಷ್ಟಾಚಾರ ನಿರ್ಮೂಲನೆಗೆ ಹಗಲಿರುಳು ಶ್ರಮಿಸುತ್ತಿವೆ. ಇವುಗಳಿಗೆ ಜನ ಸಾಮಾನ್ಯರ ಬೆಂಬಲ ತೀರ ಅಗತ್ಯವಿರುತ್ತದೆ ಎಂದು ಅವರು ಹೇಳಿದರು.
ಮಗು ಭೂಮಿಗೆ ಕಾಲಿಡುವಾಗ ಧರ್ಮ, ಜಾತಿ, ಲಿಂಗವೆಂಬ ಯಾವುದೇ ತಾರತಮ್ಯ ಇರುವುದಿಲ್ಲ. ಆದರೆ, ಮಗು ಬೆಳೆಯುತ್ತಿದಂತೆ ಪೋಷಕರು ತನ್ನ ಮಗುವಿಗೆ ಹಾಕುವ ಉಡುಪು, ನಡುವಳಿಕೆಯಿಂದಲೇ ಇತರರಿಂದ ಪ್ರತ್ಯೇಕಿಸಲು ಪ್ರಾರಂಭಿಸುತ್ತಾರೆ. ಇಂತಹ ಒಡಕು ವ್ಯಕ್ತಿತ್ವವೇ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣ ಎಂದು ಅವರು ಹೇಳಿದರು.
ಮಾನವ ಹಕ್ಕುಗಳು ಮನುಷ್ಯನ ಏಳಿಗೆಗೆ ಪೂರಕವಾಗಿದ್ದು, ದಬ್ಬಾಳಿಕೆ, ದೌರ್ಜನ್ಯ ಹಾಗೂ ಅನ್ಯಾಯಗಳಿಂದ ನಲಗುತ್ತಿರುವ ಪ್ರತಿಯೊಬ್ಬರನ್ನು ರಕ್ಷಿಸುವ ಧ್ಯೇಯ ಹೊಂದಿವೆ. ಆದರೆ, ಇತ್ತೀಚೆಗೆ ಜಗತ್ತಿನೆಲ್ಲೆಡೆ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ. ಆ ಮೂಲಕ ಮಾನವ ಕುಲದ ಶಾಂತಿ ಮತ್ತು ಭದ್ರತೆ ಅಪಾಯಕ್ಕೊಳಗಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ಡಾ.ಕೃಪಾ ಆಳ್ವ ಮಾತನಾಡಿ, ವಿದ್ಯಾವಂತರಲ್ಲಿ ಸಮಾಜ ಪರಿವರ್ತನೆ ಮಾಡುವ ಶಕ್ತಿ ಇರುತ್ತದೆ. ಈ ನಿಟ್ಟಿನಲ್ಲಿ ಪ್ರಜ್ಞಾವಂತರು ಸಮಾಜದ ಒಳಿತಿಗೆ ಕೆಲಸ ಮಾಡಬೇಕಾಗಿದೆ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಕೆ.ಜಿ.ನಾಗಲಕ್ಷ್ಮಿ ಬಾಯಿ, ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ.ಹುನುಗುಂದ್, ಮಾನವ ಹಕ್ಕುಗಳ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಎನ್.ಶ್ರೀನಿವಾಸ್ ಸೇರಿ ಪ್ರಮುಖರು ಹಾಜರಿದ್ದರು.