×
Ad

ಕೈದಿಗಳ ಮೇಲೆ ಹಲ್ಲೆ: ಬೆಳಗಾವಿ ಜೈಲಿಗೆ ಬಲವಂತದ ಸ್ಥಳಾಂತರ

Update: 2017-07-16 19:27 IST

ಬೆಂಗಳೂರು, ಜು.16: ಕೇಂದ್ರ ಕಾರಾಗೃಹದಲ್ಲಿ ಅಕ್ರಮ ನಡೆದಿದೆ ಎನ್ನಲಾದ ಆರೋಪ ಪ್ರಕರಣದ ಬಗ್ಗೆ ಡಿಜಿಪಿ ಡಿ.ರೂಪಾ ಅವರಿಗೆ ಮಾಹಿತಿ ನೀಡಿದ್ದ ಕೆಲ ಕೈದಿಗಳ ಮೇಲೆ ಹಲ್ಲೆ ನಡೆಸಿ, 18 ಕೈದಿಗಳನ್ನು ಬಲವಂತವಾಗಿ ಸ್ಥಳಾಂತರ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

ರವಿವಾರ ಪರಪ್ಪನ ಅಗ್ರಹಾರ ಜೈಲಿನಿಂದ ಕೆಲ ಕೈದಿಗಳನ್ನು ಮೈಸೂರು, ಬಳ್ಳಾರಿ ಹಾಗೂ ಬೆಳಗಾವಿಯ ಹಿಂಡಲಗಾ ಜೈಲಿಗೆ ರವಾನೆ ಮಾಡಲಾಗಿದೆ. ಇನ್ನೂ ಕೆಲವರು ಪೊಲೀಸ್ ವಾಹನದಿಂದ ಹೊರ ಬಂದಾಗ ಅವರ ಮೇಲೆ ಗಂಭೀರ ಹಲ್ಲೆ ನಡೆದಿರುವುದು ಬೆಳಕಿಗೆ ಬಂದಿದ್ದು, ಕೆಲವರಿಗೆ ನಡೆಯಲು ಸಾಧ್ಯ ಆಗುತ್ತಿರಲಿಲ್ಲ.

ರೂಪಾ ಪರ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಡಿ.ರೂಪಾ ಅವರಿಗೆ ಅಕ್ರಮಗಳ ಬಗ್ಗೆ ದೂರು ನೀಡಿದ್ದ ಎನ್ನಲಾದ ಅನಂತಮೂರ್ತಿ, ಬಾಲು ಹಾಗೂ ಲಾಂಗ್ ಬಾಬು ಎಂಬವರನ್ನು ಉದ್ದೇಶ ಪೂರಕವಾಗಿ ಬೆಳಗಾವಿ ಹಿಂಡಲಗಾ ಜೈಲಿಗೆ ರವಾನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಒಪ್ಪದ ಕೈದಿಗಳ ಮೇಲೆ: ಕೆಲ ಕೈದಿಗಳು ನಾವು ಎಲ್ಲಿಯೋ ಹೋಗುವುದಿಲ್ಲ ಎಂದು ಜೈಲಿನ ಅಧೀಕ್ಷಕರಿಗೆ ಹೇಳಿದಾಗ ಹಲ್ಲೆ ನಡೆಸಿ ರಾತ್ರಿ ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ಜೈಲಿನಲ್ಲಿ ಕೈದಿ ಹುಟ್ಟುಹಬ್ಬ ಆಚರಣೆ?  ಪರಪ್ಪನ ಅಗ್ರಹಾರ ಜೈಲಿನ ಅಕ್ರಮಗಳ ಬಗ್ಗೆ ಉಪ ಪೊಲೀಸ್ ಮಹಾ ನಿರೀಕ್ಷಕಿ(ಡಿಐಜಿಪಿ) ಡಿ.ರೂಪಾ ಅವರು 2ನೆ ವರದಿ ನೀಡಿದ ಬಳಿಕ, ಸೆಂಟ್ರಲ್ ಜೈಲ್‌ನಲ್ಲಿ ಅಧಿಕಾರಿಗಳಿಗೆ ಲಂಚ ನೀಡಿ ಕೈದಿಯೊಬ್ಬ ಅದ್ದೂರಿಯಾಗಿ ಹುಟ್ಟಹಬ್ಬ ಅಚರಿಸಿಕೊಂಡಿರುವ ಆರೋಪ ಕೇಳಿಬಂದಿದೆ.

ಕೇಂದ್ರ ಕಾರಾಗೃಹದ ಇ ಬ್ಲಾಕ್‌ನಲ್ಲಿ ವಿಚಾರಣಾಧೀನ ಕೈದಿ ಕ್ಯಾತೆ ಚೇತನ್ ಎಂಬಾತ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಅಲ್ಲದೇ, ಸಹ ಖೈದಿಗಳಿಗೆಲ್ಲ ಹುಟ್ಟುಹಬ್ಬದ ಸಂಭ್ರಮ ಹಂಚಿಕೊಂಡಿದ್ದಾನೆ ಎನ್ನಲಾಗಿದೆ. ಜೈಲಿನಲ್ಲಿ 10 ಮಂದಿ ಪ್ರಭಾವಿ ಕೈದಿಗಳಿದ್ದು, ಅವರು ಹೇಳಿದಂತೆ ವಾರ್ಡನ್‌ಗಳ ನಿಯೋಜನೆ ಮಾಡಲಾಗುತ್ತದೆ. ಅವರ ಅಣತಿಯಂತೆ ಜೈಲಿನಲ್ಲಿ ಕೈದಿಗಳು ನಡೆದುಕೊಳ್ಳಬೇಕಿದೆ ಎಂದು ಹೇಳಲಾಗುತ್ತಿದೆ.

ಸಾವಿನ ಸುದ್ದಿ ಮುಟ್ಟಿಸಲು ಬಿಡದ ಪೊಲೀಸರು?: ಜೈಲಿನಲ್ಲಿರುವ ವಿಚಾರಣಾಧೀನ ಕೈದಿಯೊಬ್ಬರ ತಂದೆಯ ಸಾವಿನ ಸುದ್ದಿ ತಿಳಿಸಲು ಬಂದ ಪತ್ನಿಯನ್ನು ಒಳಗಡೆ ಬಿಡಲು ಪೊಲೀಸರು ಮುಂದಾಗಿಲ್ಲ ಎನ್ನುವ ಆರೋಪ ಕೇಳಿಬಂದಿದೆ.

 ಬೆಳಗ್ಗೆಯಿಂದ ಅರುಣಾ ಅವರು ಪತಿಯನ್ನು ಭೇಟಿಯಾಗಲು ಸಾಕಷ್ಟು ಪ್ರಯತ್ನಿಸಿದರು ಸಾಧ್ಯವಗಲೇ ಇಲ್ಲ. ನೀವಾದರೂ ರಾಜಣ್ಣನಿಗೆ ತಂದೆಯ ಸಾವಿನ ಸುದ್ದಿಯನ್ನು ತಿಳಿಸಿ ಎಂದು ಬೇಡಿಕೊಂಡರು ಪೊಲೀಸರು ಮುಂದಾಗಿಲ್ಲ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News