ಕೆಂಪಯ್ಯ, ಎಂ.ಎನ್.ರೆಡ್ಡಿಗೆ ಮುಖ್ಯಮಂತ್ರಿ ತರಾಟೆ
ಬೆಂಗಳೂರು, ಜು.16: ದಕ್ಷಿಣ ಕನ್ನಡದ ಕೋಮು ಸಂಘರ್ಷ ಮತ್ತು ಕೇಂದ್ರ ಕಾರಾಗೃಹ ಇಲಾಖೆಯ ಡಿಜಿಪಿ-ಡಿಐಜಿಗಳಿಬ್ಬರ ಗಲಾಟೆ ಸಂಬಂಧ ನಿಖರ ಮಾಹಿತಿ ಕಲೆ ಹಾಕದ ಗುಪ್ತದಳ ಹಿರಿಯ ಅಧಿಕಾರಿಗಳು ಮತ್ತು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸದ ಗೃಹ ಇಲಾಖೆಯ ಸಲಹೆಗಾರರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದಲೂ ಕೋಮು ಸಂಘರ್ಷದಿಂದ ಶಾಂತಿ ಕದಡಿ ಪ್ರಾಣಹಾನಿಯೂ ಆಗಿತ್ತು. ಹಲವಾರು ಮಂದಿ ಗಾಯಗೊಂಡಿದ್ದರು.ನ ಅದೇ ರೀತಿ, ನಾಲ್ಕು ದಿನಗಳಿಂದ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಸಂಬಂಧ ಅಧಿಕಾರಿಗಳಿಬ್ಬರ ಗಲಾಟೆ ಬಗ್ಗೆ ರವಿವಾರ ಬೆಳಗ್ಗೆ ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಹಾಗೂ ಗೃಪ್ತ ದಳದ ಡಿಜಿಪಿ ಎಂ.ಎನ್.ರೆಡ್ಡಿ ಅವರೊಂದಿಗೆ ಚರ್ಚಿಸಿ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.
ನಿಮ್ಮನ್ನು ನಂಬಿ ನನ್ನ ಹೆಸರು ಹಾಳು ಮಾಡಿಕೊಳ್ಳುವಂತಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಂದಿಸಿದ್ದಾರೆ ಎನ್ನಲಾಗಿದೆ. ಅಷ್ಟೆಲ್ಲಾ ಗಲಾಟೆಗಳಾಗಿದ್ದರೂ ಗುಪ್ತದಳ ಎಲ್ಲಿ ಹೋಗಿತ್ತು, ಏನು ಕೆಲಸ ಮಾಡುತ್ತಿತ್ತು ಎಂಬ ಪ್ರಶ್ನೆಗಳನ್ನು ಸಿದ್ದರಾಮಯ್ಯನವರು ಮುಂದಿಟ್ಟಾಗ ಕೆಂಪಯ್ಯ ಸಮಜಾಯಿಷಿ ನೀಡಲು ಮುಂದಾದರು. ಇದರಿಂದ ಇನ್ನಷ್ಟು ಸಿಟ್ಟಾದ ಸಿದ್ದರಾಮಯ್ಯ ಅವರು ಗುಪ್ತದಳದ ಡಿಜಿಪಿ ಎಂ.ಎನ್.ರೆಡ್ಡಿ ಮತ್ತು ಕೆಂಪಯ್ಯ ಇಬ್ಬರನ್ನು ತೀವ್ರ ತರಾಟೆಗೆ ತೆಗೆದುಕೊಂಡರು ಎಂದು ತಿಳಿದುಬಂದಿದೆ.
ಇದಕ್ಕೂ ಮೊದಲು ಬಂಧಿಖಾನೆ ಇಲಾಖೆಯಲ್ಲಿ ಡಿಜಿಪಿ ಸತ್ಯನಾರಾಯಣರಾವ್ ಮತ್ತು ಡಿಐಜಿ ರೂಪಾ ಅವರ ನಡುವಿನ ಸಂಘರ್ಷದ ವಿಷಯವಾಗಿ ಸಿದ್ದರಾಮಯ್ಯ ಕೆಂಡಾಮಂಡಲವಾಗಿದ್ದರು ಎನ್ನಲಾಗಿದೆ. ಹದ್ದುಮೀರಿದ ಅಧಿಕಾರಿಗಳನ್ನು ನಿಯಂತ್ರಣದಲ್ಲಿಡಬೇಕಿದೆ. ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಬಹುದು ಎಂಬ ಮಾಹಿತಿ ಕರಾರುವಕ್ಕಾಗಿ ನೀಡಿ ಎಂದು ಸಲಹೆಗಾರರಿಗೆ ಕಠಿಣ ಶಬ್ದಗಳಲ್ಲಿ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಗ್ದಾಳಿಯಿಂದ ತಬ್ಬಿಬ್ಬಾದ ಕೆಂಪಯ್ಯ ಮತ್ತು ಎಂ.ಎನ್.ರೆಡ್ಡಿ ಅವರು ಮುಂದೆ ಇಂತಹ ತಪ್ಪುಗಳಾಗದಂತೆ ನೋಡಿಕೊಳ್ಳುವ ಭರವಸೆ ನೀಡಿ ಹೊರ ಬಂದಿದ್ದಾರೆ ಎನ್ನಲಾಗಿದೆ.