ಮದುವೆ ಬ್ರೋಕರ್‌ಗಳ ಮಟ್ಟಕ್ಕಿಳಿದ ನಾಯಕರು

Update: 2017-07-17 03:58 GMT

ಮಹಾತ್ಮಾ ಗಾಂಧೀಜಿಯವರು ದಲಿತರನ್ನು ‘ಹರಿಜನ’ ಎಂದು ಕರೆದಾಗ ಅಂಬೇಡ್ಕರ್ ಕಟುವಾಗಿ ‘‘ನಾವು ದೇವರ ಮಕ್ಕಳಾದರೆ ನೀವೆಲ್ಲ ದೆವ್ವದ ಮಕ್ಕಳೇ?’ ಎಂದು ಪ್ರಶ್ನಿಸಿ ಆ ಔದಾರ್ಯವನ್ನು ಸಾರಾಸಗಟಾಗಿ ನಿರಾಕರಿಸಿದರು. ಒಂದು ಕಾಲದಲ್ಲಿ ಗಾಂಧೀಜಿ ಬಳಸಿದ ‘ಹರಿಜನ’ವನ್ನು ದಲಿತರಿಗೆ ಇಂದು ಬಳಸಿದ್ದೇ ಆದರೆ ಅವರ ವಿರುದ್ಧ ಪ್ರಕರಣ ದಾಖಲಿಸಬಹುದು.

ಒಂದು ಶೋಷಿತ, ಅವಮಾನಿತ ಸಮುದಾಯಕ್ಕೆ ಕೆಲವೊಮ್ಮೆ ನಾವು ಔದಾರ್ಯವನ್ನು ತೋರಿಸುವ ಹೆಸರಿನಲ್ಲಿಯೇ ಅವರನ್ನು ಇನ್ನಷ್ಟು ಅವಮಾನಿಸುತ್ತೇವೆ. ಅವರನ್ನು ಮೇಲೆತ್ತಲು ಹಮ್ಮಿಕೊಂಡ ಸಾಮಾಜಿಕ ಕಾರ್ಯಕ್ರಮಗಳನ್ನು ಅವಮಾನಿಸುತ್ತಾ, ಅವರನ್ನು ಸಬಲರನ್ನಾಗಿಸಲು ಹಮ್ಮಿಕೊಂಡ ಮೀಸಲಾತಿಯನ್ನು ವ್ಯಂಗ್ಯ ಮಾಡುತ್ತಲೇ, ಮಗದೊಂದೆಡೆ ಅದೇ ಜನರು ದಲಿತರ ಮನೆಯಲ್ಲಿ ವಾಸ್ತವ್ಯ ಹೂಡುವ, ದಲಿತರ ಮನೆಯಲ್ಲಿ ಊಟ ಮಾಡುವ ನಾಟಕ ಮಾಡುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪೇಜಾವರಶ್ರೀಗಳು ದಲಿತರ ಕೇರಿಗೆ ಹೋಗಿ, ಅವರ ಕೈಯಿಂದ ತನ್ನ ಪಾದವನ್ನು ತೊಳೆಸಿಕೊಂಡು, ದಲಿತರ ಉದ್ಧಾರದ ಹೆಸರಲ್ಲಿ ಪ್ರಹಸನ ನಡೆಸಿದರು. ಈ ಕಾರ್ಯಕ್ರಮಗಳಿಂದ ದಲಿತರಿಗೆ ಸಿಕ್ಕಿದ ಲಾಭವೆಷ್ಟು? ದಲಿತರ ಮನೆಯಲ್ಲಿ ಉಂಡ, ಪಾದ ತೊಳೆಸಿಕೊಂಡ ನಾಯಕರಿಗೆ ಸಿಕ್ಕಿದ ಲಾಭವೆಷ್ಟು? ದಲಿತರ ಕೇರಿಗೆ ಹೋದ ಕಾರಣ ಮಾಧ್ಯಮಗಳಲ್ಲಿ ಪೇಜಾವರಶ್ರೀಗಳು ‘ದೊಡ್ಡವ’ರಾದರೇ ಹೊರತು, ಪಾದ ತೊಳೆದ ದಲಿತರ ಬದುಕಿನಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ಕೆಲವು ವರ್ಷಗಳ ಹಿಂದೆ, ದಲಿತರ ಮನೆಯಲ್ಲಿ ವಾಸ್ತವ್ಯ ಹೂಡಿ ಕುಮಾರಸ್ವಾಮಿಯೂ ಇದೇ ರೀತಿ ಮಾಧ್ಯಮಗಳಲ್ಲಿ ಮಿಂಚಿದ್ದರು. ಆ ಮೂಲಕ ಅವರು ಅದ್ಯಾವುದೋ ದೊಡ್ಡ ತ್ಯಾಗವನ್ನು ದಲಿತರಿಗೆ ಮಾಡಿದರೋ ಎಂಬಂತೆ ಮಾಧ್ಯಮಗಳಲ್ಲಿ ಬಣ್ಣಿಸಲ್ಪಟ್ಟರು.

ಉತ್ತರ ಪ್ರದೇಶದಲ್ಲಿ, ದಲಿತರ ಮನೆಗೆ ಮುಖ್ಯಮಂತ್ರಿ ಭೇಟಿ ನೀಡುವ ಮೊದಲು, ದಲಿತರಿಗೆ ಸಾಬೂನುಗಳನ್ನು ಕೊಟ್ಟು, ಚೆನ್ನಾಗಿ ಸ್ನಾನ ಮಾಡಲು ತಿಳಿಸಿದರಂತೆ. ದಲಿತರ ಕುರಿತಂತೆ ಇವರು ತೋರಿಸುವ ಅನುಕಂಪ, ಔದಾರ್ಯವೂ ಅಸೃಶ್ಯತೆಯ ಒಂದು ಭಾಗವೇ ಆಗಿದೆ ಎನ್ನುವುದನ್ನು ಈ ‘ಸಾಬೂನು’ ಬಯಲುಗೊಳಿಸಿತು. ಇತ್ತೀಚೆಗೆ ಯಡಿಯೂರಪ್ಪ ಅವರು ಮಾಡುವುದಕ್ಕೆ ಯಾವ ಕೆಲಸವೂ ಇಲ್ಲದ ಕಾರಣ, ದಿಲ್ಲಿಯ ವರಿಷ್ಠರ ಸೂಚನೆಯಂತೆ ಒಲ್ಲದ ಮನಸ್ಸಿನಲ್ಲಿ ದಲಿತರ ಮನೆಯಲ್ಲಿ ಉಣ್ಣುವ ನಾಟಕವಾಡತೊಡಗಿದರು. ಹೊಟೇಲಿನಿಂದ ಊಟ ತರಿಸಿ ಉಂಡ ನಾಟಕ ಮಾಡುವುದು, ದಲಿತರು ಊಟ ಕೊಟ್ಟಾಗ ಶೋಭಾ ಕರಂದ್ಲಾಜೆ ‘ನನಗಿವತ್ತು ಉಪವಾಸ’ ಎಂದು ತಿರಸ್ಕರಿಸುವುದು... ಹೀಗೆ, ಬಿಜೆಪಿಯ ನಾಯಕರು ರಾಜ್ಯದಲ್ಲಿ ಕಳೆದ ಕೆಲವು ಸಮಯದಿಂದ ವಿಶಿಷ್ಟ ರೀತಿಯಲ್ಲಿ ಅಸ್ಪಶ್ಯತೆಯನ್ನು ಆಚರಿಸುತ್ತಾ, ದಲಿತರಿಗೆ ಅವಮಾನ ಮಾಡುತ್ತಾ ಬಂದಿದ್ದಾರೆ. ದಲಿತರು ಇದನ್ನು ಹೇಗೆ ಸ್ವೀಕರಿಸಬೇಕು ಎಂದು ತಿಳಿಯದೆ ಅಸಹಾಯಕರಾಗಿ ವೀಕ್ಷಿಸುತ್ತಿದ್ದಾರೆ.

ಇದೀಗ ನಾಯಕರು ದಲಿತರನ್ನು ಮುಂದಿಟ್ಟುಕೊಂಡು ಇನ್ನಷ್ಟು ತಮಾಷೆಗಳನ್ನು ಮಾಡಲು ಶುರು ಹಚ್ಚಿದ್ದಾರೆ. ದಲಿತರ ಅಸ್ಪಶ್ಯತೆ, ನೋವು, ಅವಮಾನಗಳನ್ನು ಇನ್ನೊಬ್ಬರನ್ನು ಬಗ್ಗು ಬಡಿಯಲು ಅಸ್ತ್ರವಾಗಿ ಬಳಸಲು ಯತ್ನಿಸುತ್ತಿದ್ದಾರೆ. ಈ ಪ್ರಯತ್ನದಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರೂ ಸ್ಪರ್ಧೆಗಿಳಿದಿದ್ದಾರೆ. ಅತ್ಯಂತ ವಿಷಾದನೀಯ ಸಂಗತಿಯೆಂದರೆ ಸ್ವತಃ ದಲಿತ ಸಮುದಾಯದಿಂದ ಬಂದಿರುವ ಕಾಂಗ್ರೆಸ್ ಮುಖಂಡ ಪರಮೇಶ್ವರ್ ಕೂಡ ದಲಿತರ ಬದುಕನ್ನು ಸಂವೇದನಾ ಹೀನರಂತೆ ಬಳಸಿಕೊಳ್ಳುತ್ತಿದ್ದಾರೆ.

ದಲಿತರ ಮನೆಯಲ್ಲಿ ಊಟ ಮಾಡುವ ಪ್ರಹಸನ ಮಾಡದೇ, ದಲಿತರ ಜೊತೆಗೆ ವಿವಾಹ ಸಂಬಂಧಗಳನ್ನು ಮಾಡಿಕೊಳ್ಳಿ ಎನ್ನುವ ಚರ್ಚೆಯನ್ನು ಎಷ್ಟು ಕೀಳುಮಟ್ಟಕ್ಕೆ ರಾಜಕಾರಣಿಗಳು ಇಳಿಸಿದ್ದಾರೆಂದರೆ, ದಲಿತರ ಹೆಣ್ಣು ಮಕ್ಕಳ ಕುರಿತಂತೆ ನಮ್ಮ ನಾಯಕರ ಮನಸ್ಥಿತಿಯನ್ನು ಇದು ಬಹಿರಂಗಪಡಿಸಿದೆ. ಇವರ ಪ್ರಕಾರ, ಇವರು ಮದುವೆಯಾಗುವುದಕ್ಕೆ ಒಪ್ಪಿದಾಕ್ಷಣ ಈ ನೀಚರನ್ನು ದಲಿತ ಹೆಣ್ಣು ಮಕ್ಕಳು ಓಡೋಡಿ ಬಂದು ಮದುವೆಯಾಗುತ್ತಾರೆ. ಮೇಲ್ವರ್ಣೀಯರ ಜೊತೆಗೆ ಮದುವೆಯಾಗಲು ದಲಿತರು ತುದಿಗಾಲಲ್ಲಿ ನಿಂತಿದ್ದಾರೆ ಮತ್ತು ಹಾಗೆ ಮದುವೆಯಾಗುವುದು ದಲಿತರಿಗೆ ಮೇಲ್ಜಾತಿಯ ಜನರು ಮಾಡುವ ಮಹದೋಪಕಾರ ಎಂಬ ಅಭಿಪ್ರಾಯ ಇವರೊಳಗಿದೆ.

ಬಿಜೆಪಿಯವರು ‘ಹಿಂದೂ ಧರ್ಮ ಇದೆ’ ಎಂದು ಹೇಳುತ್ತಾರೆ. ಆದರೆ ವಿವಾಹ ಸಂಬಂಧ ಬಂದಾಗ ಈ ಹಿಂದೂ ನೂರಾರು ಚೂರುಗಳಾಗಿ ಛಿದ್ರವಾಗುತ್ತವೆ. ಆಗ ಎಲ್ಲರೂ ಬೇರೆ ಬೇರೆ ಜಾತಿಗಳಾಗಿ ಗುರುತಿಸಲ್ಪಡುತ್ತಾರೆ. ಹಾಗಿರುವಾಗ ಇವರು ಯಾವುದನ್ನು ‘ಹಿಂದೂ ಧರ್ಮ’ ಎಂದು ಕರೆಯುತ್ತಿರುವುದು? ಶೋಭಾಕರಂದ್ಲಾಜೆಯಂತಹ ಮಹಿಳೆ, ಯಾವ ನಾಚಿಕೆಯೂ ಇಲ್ಲದೆ, ದಲಿತರನ್ನು ಮದುವೆಯಾಗುವಂತೆ ಕಾಂಗ್ರೆಸ್‌ನ ಮುಖಂಡರಿಗೆ ಸೂಚನೆ ನೀಡುತ್ತಾರೆ. ಈ ಸಂದರ್ಭದಲ್ಲಿ ಅವರು ದಲಿತ ಹೆಣ್ಣು ಮಕ್ಕಳು ತನ್ನಂತೆಯೇ ಮಹಿಳೆಯರು ಎನ್ನುವುದನ್ನು ಮರೆತಿದ್ದಾರೆ. ಇದೇ ಸಂದರ್ಭದಲ್ಲಿ ಅದಕ್ಕೆ ಉತ್ತರಿಸುವ ಭರದಲ್ಲಿ ಪರಮೇಶ್ವರ್‌ನಂತಹ ನಾಯಕರು ‘ನಮಗೆಲ್ಲ ಮದುವೆಯಾಗಿದೆ. ಶೋಭಾಕರಂದ್ಲಾಜೆ ದಲಿತರನ್ನು ಮದುವೆಯಾಗಲಿ’ ಎಂದು ವ್ಯಂಗ್ಯವಾಡುತ್ತಾರೆ.

ಇವರ ವ್ಯಂಗ್ಯದ ಗುರಿ ಎದುರಿಗಿರುವ ನಾಯಕರೇ ಆಗಿದ್ದರೂ, ಅವರು ನಿಜಕ್ಕೂ ವ್ಯಂಗ್ಯವಾಡುತ್ತಿರುವುದು ದಲಿತರನ್ನೇ ಆಗಿದೆ. ದಲಿತರನ್ನು ಮದುವೆಯಾದರೆ ಆಕಾಶ ಸಿಡಿದು ಹೋಗುತ್ತದೆಯೇ? ಭೂ ಕಂಪ ನಡೆಯುತ್ತದೆಯೇ? ಇದೂ ಒಂದು ಸವಾಲೇ? ಇವರು ಒಪ್ಪಿದರೆ ಇವರನ್ನು ಮದುವೆಯಾಗಲು ದಲಿತರು ಸಿದ್ಧರಿರುತ್ತಾರೆ ಎಂದು ಹೇಗೆ ಭಾವಿಸಿದ್ದಾರೆ? ಮನದೊಳಗೆ ಜಾತೀಯತೆಯ ಹೊಲಸನ್ನು ಮೆತ್ತಿಕೊಂಡ, ಕೋಮುವಾದದ ಹಿಂಸೆಯ ಕ್ರೌರ್ಯದಿಂದ ಕಳಂಕಗೊಂಡ ಈ ನಾಯಕರು ದಲಿತರ ಕೇರಿಗೆ ಕಾಲಿಟ್ಟರೆ ಅವರು ತಮ್ಮ ಕೇರಿಯನ್ನೇ ಶುದ್ಧಗೊಳಿಸಬೇಕಾದಂತಹ ಸನ್ನಿವೇಶವಿದೆ. ಹೀಗಿರುವಾಗ, ಇವರನ್ನು ದಲಿತರು ಮದುವೆಯಾಗುವುದನ್ನು ಕಲ್ಪಿಸಿಕೊಳ್ಳುವುದಾದರೂ ಹೇಗೆ ಸಾಧ್ಯ?

ಇಂದು ಅಂತರ್ಜಾತಿ ವಿವಾಹದ ಬಗ್ಗೆ ಚರ್ಚೆಯಾಗಬೇಕು ನಿಜ. ಆದರೆ ಇನ್ನೊಬ್ಬರ ನಿಂದಿಸುವುದಕ್ಕಾಗಿ, ಹಣಿಯುವುದಕ್ಕಾಗಿ ದಲಿತರನ್ನು ಮದುವೆಯಾಗುವ ಸವಾಲನ್ನು ಒಡ್ಡುವುದು ನೇರವಾಗಿ ದಲಿತರ ಜಾತಿಯನ್ನು ನಿಂದನೆ ಮಾಡಿದಂತೆ. ಇಂದು ರಾಜ್ಯದಲ್ಲಿ, ದೇಶದಲ್ಲಿ ದಲಿತರು ಬ್ರಾಹ್ಮಣರನ್ನು ಮದುವೆಯಾದ ಉದಾಹರಣೆಗಳಿವೆ. ಬ್ರಾಹ್ಮಣರು ದಲಿತರನ್ನು ಮದುವೆಯಾದ ಉದಾಹರಣೆಗಳೂ ಇವೆ. ಅವರ್ಯಾರೂ ಅದನ್ನೊಂದು ತ್ಯಾಗ, ಬಲಿದಾನ ಎಂದು ಬಿಂಬಿಸಿಕೊಂಡಿಲ್ಲ. ತಮಗೆ ಪ್ರೀತಿ, ಸಂಗಾತಿಯ ಅಗತ್ಯವಿದೆ. ಈ ಕಾರಣಕ್ಕಾಗಿ ಮದುವೆಯಾಗಿದ್ದಾರೆ.

ಇಂದು ಹಲವು ಮೇಲ್ಜಾತಿಗಳಲ್ಲಿ ಹೆಣ್ಣುಗಳ ಕೊರತೆ ವ್ಯಾಪಕವಾಗಿದೆ. ಹೆಣ್ಣು ಸಿಗದೇ ಇರುವುದು ಮೇಲ್ಜಾತಿಯ ಸಮಸ್ಯೆಯೇ ಹೊರತು, ದಲಿತರ ಸಮಸ್ಯೆಯಲ್ಲ. ದಲಿತರಿಗೆ ಇವರ ಇಂತಹ ನಿಕೃಷ್ಟ ಔದಾರ್ಯಗಳ ಅಗತ್ಯವಿಲ್ಲ. ಅವರಿಗೆ ತಲೆಎತ್ತಿ ಬಾಳುವುದಕ್ಕೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ನೆರವನ್ನು ನೀಡಿದರಷ್ಟೇ ಸಾಕು. ಇನ್ನಾದರೂ ರಾಜಕಾರಣಿಗಳು ಮದುವೆ ಬ್ರೋಕರ್‌ಗಳ ಮಟ್ಟದಿಂದ ಮೇಲೆ ಬಂದು ತಮ್ಮ ಸ್ಥಾನದ ಘನತೆಗೆ ತಕ್ಕಂತೆ ಮಾತನಾಡುವುದನ್ನು ಕಲಿಯಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News