ವಿಂಬಲ್ಡನ್ ದಂತಕಥೆಯಾಗುವುದನ್ನು ಕನಸಲ್ಲೂ ಎಣಿಸಿರಲಿಲ್ಲ: ಫೆಡರರ್

Update: 2017-07-17 18:39 GMT

ಲಂಡನ್, ಜು.17: ‘‘ ನಗಬೇಡಿ... ನಾನು ವಿಂಬಲ್ಡನ್‌ನಲ್ಲಿ ದಂತಕಥೆಯಾಗುವುದನ್ನು ಕನಸಲ್ಲೂ ಎಣಿಸಿರಲಿಲ್ಲ ಎಂದು ಎಂಟು ಬಾರಿ ವಿಂಬಲ್ಡನ್ ಕಿರೀಟ ಧರಿಸಿರುವ ಸ್ವಿಸ್ ಟೆನಿಸ್ ತಾರೆ ರೋಜರ್ ಫೆಡರರ್ ಅಭಿಪ್ರಾಯಪಟ್ಟಿದ್ದಾರೆ.

 ರೋಜರ್ ಫೆಡರರ್ ವಿಂಬಲ್ಡನ್ ಪುರುಷರ ಸಿಂಗಲ್ಸ್‌ನ ಫೈನಲ್‌ನಲ್ಲಿ ರವಿವಾರ ಜಯ ಗಳಿಸುವ ಮೂಲಕ ಎಂಟನೆ ಬಾರಿ ವಿಂಬಲ್ಡನ್ ಕಿರೀಟ ಧರಿಸಿದ್ದರು.
ರವಿವಾರ ನಡೆದ ಫೈನಲ್‌ನಲ್ಲಿ ಫೆಡರರ್ ಅವರು ಕ್ರೋವೇಶಿಯಾದ ಮರಿನ್ ಸಿಲಿಕ್ ವಿರುದ್ಧ 6-3, 6-1, 6-4 ಅಂತರದಲ್ಲಿ ಜಯ ಗಳಿಸುವ ಮೂಲಕ 19ನೆ ಗ್ರಾನ್‌ಸ್ಲಾಮ್ ಪ್ರಶಸ್ತಿ ತನ್ನದಾಗಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಎಂಟು ಬಾರಿ ವಿಂಬಲ್ಡನ್ ಪ್ರಶಸ್ತಿ ಜಯಿಸುವ ಗುರಿ ನನಗಿರಲಿಲ್ಲ. ಆ ರೀತಿ ಯೋಚಿಸಿರಲಿಲ್ಲ’ ಎಂದರು.

36ರ ಹರೆಯದ ಫೆಡರರ್ 16 ವರ್ಷಗಳ ಟೆನಿಸ್ ವೃತ್ತಿ ಬದುಕಿನಲ್ಲಿ ಮಾಜಿ ದಂತಕಥೆಗಳಾದ ಪೀಟ್ ಸಾಂಪ್ರಾಸ್ ಮತ್ತು ವಿಲಿಯಮ್ ರೆನ್‌ಶಾ ದಾಖಲೆಯನ್ನು ಅಳಿಸಿ ಹಾಕಿದ್ದರು.

2003ರಲ್ಲಿ ಆಸ್ಟ್ರೇಲಿಯದ ಮಾರ್ಕ್ ಫಿಲಿಪೌಸಿಸ್ ಅವರನ್ನು ವಿಂಬಲ್ಡನ್ ಫೈನಲ್‌ನಲ್ಲಿ ಮಣಿಸುವ ಮೂಲಕ ಮೊದಲ ಬಾರಿ ವಿಂಬಲ್ಡನ್ ಟ್ರೋಫಿಗೆ ಮುತ್ತಿಕ್ಕಿದ್ದರು. ಆ ಬಳಿಕ ಅವರು 2007ರ ತನಕ ಸತತ ಐದು ಬಾರಿ ಪ್ರಶಸ್ತಿ ಜಯಿಸಿದರು. 2008ರಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ಎಡವಿದರು.2009ರಲ್ಲಿ ಮತ್ತೆ ಪ್ರಶಸ್ತಿ ಬಾಚಿಕೊಂಡರು. 2010 ಮತ್ತು 2011ರಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. 2012ರಲ್ಲಿ ಮತ್ತೊಮ್ಮೆ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

 ಏಳು ಬಾರಿ ಪ್ರಶಸ್ತಿ ಜಯಿಸಿದ ಬಳಿಕ ಫೆಡರರ್ 8 ನೆ ಪ್ರಶಸ್ತಿ ಗೆಲ್ಲಲು ಐದು ವರ್ಷ ಕಾಯಬೇಕಾಯಿತು. 19 ಗ್ರಾನ್ ಸ್ಲಾಮ್‌ಗಳ ಒಡೆಯನಾಗಿರುವ ಫೆಡರರ್ 2003ರಲ್ಲಿ ವಿಂಬಲ್ಡನ್ ಜಯಿಸುವ ಮೂಲಕ ಗ್ರಾನ್ ಸ್ಲಾಮ್ ಕಿರೀಟದ ಬೇಟೆ ಆರಂಭಿಸಿದ್ದರು.

ಫೆಡರರ್ 6 ಬಾರಿ ಯುಎಸ್ ಓಪನ್, ಐದು ಬಾರಿ ಆಸ್ಟ್ರೇಲಿಯನ್ ಓಪನ್ ಮತ್ತು 1 ಬಾರಿ ಫ್ರೆಂಚ್ ಓಪನ್ ಗೆದ್ದುಕೊಂಡಿದ್ದಾರೆ. ಕಳೆದ ಜನವರಿಯಲ್ಲಿ ಅವರು ಆಸ್ಟ್ರೇಲಿಯನ್ ಓಪನ್ 5ನೆ ಬಾರಿ ಜಯಿಸಿದ್ದರು. 2009ರಲ್ಲಿ ಮೊದಲ ಬಾರಿ ಫ್ರೆಂಚ್ ಓಪನ್ ಜಯಿಸಿದ್ದರು. ಆ ಬಳಿಕ ಅವರಿಗೆ ಎರಡನೆ ಬಾರಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ.

 ‘‘ ನನಗೆ ಯಾವತ್ತಾದರೂ ಒಂದು ದಿನ ವಿಂಬಲ್ಡನ್ ಫೈನಲ್ ಪ್ರವೇಶಿಸುವ ಅವಕಾಶ ದೊರೆಯಬಹುದು ಮತ್ತು ಪ್ರಶಸ್ತಿ ಗೆಲ್ಲುವೆ ಎಂದು ಭಾವಿಸಿದ್ದೆ.’’ ಎನ್ನುತ್ತಾರೆ ಕಳೆದ ವರ್ಷ ವಿಂಬಲ್ಡನ್ ಸೆಮಿಫೈನಲ್‌ನಲ್ಲಿ ಮೊಲಾಸೊ ರಾವೊನಿಕ್ ವಿರುದ್ಧ ಸೋತು ನಿರ್ಗಮಿಸಿದ್ದ ಫೆಡರರ್.

    ಫೆಡರರ್ ಈ ಸೋಲಿನ ಬಳಿಕ ಕಾಲುನೋವಿನಿಂದ ತಾತ್ಕಾಲಿಕವಾಗಿ ಟೆನಿಸ್‌ನಿಂದ ದೂರ ಸರಿದಿದ್ದರು. 2016ರ ವರ್ಷವಿಡೀ ಪ್ರಶಸ್ತಿಯ ಬರ ಎದುರಿಸಿದ್ದರು. ಆಸ್ಟ್ರೇಲಿಯನ್ ಓಪನ್ ಜಯಿಸಿದ ಬಳಿಕ ಇಂಡಿಯನ್ ವೆಲ್ಸ್ ಮತ್ತು ಮಿಯಾಮಿ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದರು.
2018ರಲ್ಲೂ ವಿಂಬಲ್ಡನ್ ಗೆಲ್ಲುವುದಾಗಿ ಹೇಳಿರುವ ಫೆಡರರ್ ನಿವೃತ್ತಿಯ ವಿಚಾರವನ್ನು ಅಲ್ಲಗಳೆದಿದ್ದಾರೆ. 9ನೆ ವಿಂಬಲ್ಡನ್ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News