3,300 ಕಿಮೀ ದೂರದ ನರ್ಮದಾ ಪರಿಕ್ರಮಕ್ಕೆ ಪಾದಯಾತ್ರೆ ಕೈಗೊಳ್ಳಲಿರುವ ದಿಗ್ವಿಜಯ ಸಿಂಗ್

Update: 2017-07-18 07:03 GMT

ಹೊಸದಿಲ್ಲಿ, ಜು. 18: ನರ್ಮದಾ ಪರಿಕ್ರಮಕ್ಕಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಅವರು ಆರು ತಿಂಗಳ 3,300 ಕಿಮೀ ದೂರದ ಪಾದಯಾತ್ರೆ ಹಮ್ಮಿಕೊಳ್ಳಲಿದ್ದಾರೆ.

ಈ ಪಾದಯಾತ್ರೆಯು ಮಧ್ಯ ಪ್ರದೇಶದ ವಿವಿಧ ಪ್ರದೇಶಗಳು ಹಾಗೂ ಗುಜರಾತ್ ಗಡಿ ಸಮೀಪದ ಹಲವು ಪ್ರದೇಶಗಳನ್ನು ಹಾದು ಹೋಗಲಿದೆ. ಇದೊಂದು ರಾಜಕೀಯೇತರ ಹಾಗೂ ಸಂಪೂರ್ಣವಾಗಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಯಾತ್ರೆ ಎಂದು ದಿಗ್ವಿಜಯ ಸಿಂಗ್ ಹೇಳಿದ್ದಾರೆ.

ಈ ಯಾತ್ರೆಯನ್ನು ಕೈಗೊಳ್ಳಬೇಕೆಂದು ತನಗೆ 1997ರಿಂದಲೇ ಮನಸ್ಸಿದ್ದರೂ ರಾಜಕೀಯ ಕೆಲಸಕಾರ್ಯಗಳ ನಿಮಿತ್ತ ಅದು ಕೈಗೂಡಿರಲಿಲ್ಲ ಎಂದು ಸಿಂಗ್ ಹೇಳಿದ್ದಾರೆ. ಈ ಪವಿತ್ರ ಪರಿಕ್ರಮವನ್ನು ಸಿಂಗ್ ಅವರು ಸೆಪ್ಟೆಂಬರ್ 30ರಂದು ಆರಂಭಿಸಲಿದ್ದಾರೆ. ತಾವು ಈ ಯಾತ್ರೆಯನ್ನು ತಮ್ಮ ಗುರುವಿನ ಸಲಹೆಯಂತೆ ಕೈಗೊಳ್ಳುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಸಿಂಗ್ ಅವರು ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿರುವುದರಿಂದ ಅವರ ಈ ಯಾತ್ರೆ ಜನಸಂಪರ್ಕ ಕಾರ್ಯಕ್ರಮವೂ ಆಗಬಹುದೆಂದು ಹಲವರು ಅಂದಾಜಿಸುತ್ತಿದ್ದಾರೆ.

ಈ ಪರಿಕ್ರಮದ ನಿಯಮಗಳಂತೆ ಅದನ್ನು ಆರಂಭಿಸಿದವರು ಅದನ್ನು ಪೂರ್ಣಗೊಳಿಸಲೇಬೇಕಿದ್ದು ಅಲ್ಲಲ್ಲಿ ವಿರಾಮ ತೆಗೆದುಕೊಳ್ಳಬಹುದಾದರೂ ಅದೇ ಸ್ಥಳದಿಂದ ಮತ್ತೆ ಯಾತ್ರೆ ಮುಂದುವರಿಸಬೇಕಿದೆ.

ಮಧ್ಯ ಪ್ರದೇಶದ ಸುಮಾರು 110 ಅಸೆಂಬ್ಲಿ ಕ್ಷೇತ್ರಗಳು ಹಾಗೂ ಗುಜರಾತ್ ರಾಜ್ಯದ ಸುಮಾರು 20 ಕ್ಷೇತ್ರಗಳನ್ನು ಈ ಯಾತ್ರೆ ಹಾದು ಹೋಗಲಿದೆ. ಬಣ ರಾಜಕೀಯದಿಂದ ಕಂಗೆಟ್ಟಿರುವ ಮಧ್ಯ ಪ್ರದೇಶ ಕಾಂಗ್ರೆಸ್ ಘಟಕಕ್ಕೆ ಹೊಸ ನಾಯಕತ್ವ ನೀಡುವ ಬಗ್ಗೆ ಕಾಂಗ್ರೆಸ್ ಯೋಚಿಸುತ್ತಿರುವ ಕಾಲಘಟ್ಟದಲ್ಲಿ ಸಿಂಗ್ ತಮ್ಮ ಯಾತ್ರೆಯ ಬಗ್ಗೆ ಘೋಷಣೆ ಮಾಡಿದ್ದಾರೆ.
ಆದರೆ ರಾಜ್ಯಸಭಾ ಸದಸ್ಯರೂ ಆಗಿರುವ ಸಿಂಗ್ ತಮಗೆ ರಾಜ್ಯ ರಾಜಕಾರಣಕ್ಕೆ ಮರಳುವ ಇಚ್ಛೆಯಿಲ್ಲ ಎಂದು ಈಗಾಗಲೇ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News