ಕುಟುಂಬ ರಾಜಕಾರಣಕ್ಕೆ ಕಡಿವಾಣ ಹಾಕಿ

Update: 2017-07-18 18:36 GMT

ಮಾನ್ಯರೆ,

ಕರ್ನಾಟಕವೂ ಸೇರಿದಂತೆ ಇಡೀ ದೇಶದಲ್ಲಿ ಎಲ್ಲಾ ರಾಜಕೀಯ ನಾಯಕರು ತಮ್ಮ ಕುಟುಂಬದ ಸದಸ್ಯರನ್ನು ತಮ್ಮ ಜೀವಿತ ಅವಧಿಯಲ್ಲಿಯೇ ವಿವಿಧ ಸದನಗಳಲ್ಲಿ ಆಯ್ಕೆ ಮಾಡಬೇಕೆಂಬ ಆಸೆಯಿಂದ ಅದಕ್ಕೆ ಬೇಕಾದ ರಾಜಕೀಯ ವಾತಾವರಣ ವನ್ನು ಮತ್ತು ಬೇಡಿಕೆಯನ್ನು ಸಿದ್ಧಪಡಿಸಿಕೊಂಡಿರುತ್ತಾರೆ. ದುರದೃಷ್ಟವೆಂದರೆ, ಎಲ್ಲಾ ರಾಜಕೀಯ ಪಕ್ಷದ ಕಾರ್ಯಕರ್ತರೂ ಸಹ ತಮ್ಮ ನಾಯಕರ ವಂಶದ ಕುಡಿಗಳನ್ನು ಪ್ರತಿನಿಧಿಗಳನ್ನಾಗಿಸಲು ಪ್ರಚಾರದ ರಥವನ್ನು ಎಳೆಯಲು ಪೈಪೋಟಿಯ ಮೇಲೆ ನಿಂತಿದ್ದಾರೆ. ಅಪ್ಪ, ಮಕ್ಕಳು, ಅಣ್ಣ, ತಮ್ಮ, ಅಕ್ಕ, ತಂಗಿ, ನಾದಿನಿ, ಅತ್ತೆ, ಸೊಸೆ ಹೀಗೆ ಮನೆಮಂದಿಯೆಲ್ಲಾ ಪ್ರತಿನಿಧಿಗಳಾಗಲು ಹೊರಟರೆ, ಇನ್ನು ಸಾಮಾನ್ಯ ಕಾರ್ಯ ಕರ್ತರಿಗೆ ಯಾವ ಕ್ಷೇತ್ರಗಳು ತಾನೇ ಸ್ಪರ್ಧೆಗೆ ಉಳಿಯುತ್ತದೆ. ಎಲ್ಲ ರಾಜಕೀಯ ಪಕ್ಷಗಳಲ್ಲೂ ಕಾರ್ಯಕರ್ತರು ಕೇವಲ ನಾಯಕರ ಗುಲಾಮರಂತೆ ಅವರ ವೈಭವೀಕರಣದ ಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಇಚ್ಛಿಸುತ್ತಾರೆ. ದುರಂತವೆಂದರೆ, ಬಹುತೇಕ ಪಕ್ಷಗಳಲ್ಲಿ ಬಹುತೇಕ ಕಾರ್ಯಕರ್ತರ ಮನಸ್ಥಿತಿ ಯೂ ಇದಕ್ಕೆ ಹೊರತಾಗಿಲ್ಲ. ರಾಜಕೀಯ ಪಕ್ಷಗಳ ನಾಯಕರು ತಮ್ಮ ಮನೆ ಮಂದಿಯೆಲ್ಲಾ ಚುನಾಯಿತ ಪ್ರತಿನಿಧಿಗಳಾಗುವ ಕೆಟ್ಟ ಸಂಸ್ಕೃತಿಗೆ ಪೂರ್ಣವಿರಾಮ ಹಾಕಲು ಮನಸ್ಸು ಮಾಡುತ್ತಿಲ್ಲ. ಕರ್ನಾಟಕದಲ್ಲಾದರೂ ಎಲ್ಲಾ ರಾಜಕೀಯ ಪಕ್ಷದ ಮುಖಂಡರು ಒಂದು ನಿರ್ಧಾರಕ್ಕೆ ಬಂದು ತಮ್ಮ ಕುಟುಂಬಗಳಿಂದ ಕೇವಲ ಒಬ್ಬೊಬ್ಬರಿಗೆ ಮಾತ್ರ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊ ಡುವ ಬದ್ಧತೆಯನ್ನು ಪ್ರದರ್ಶಿಸಲಿ. ಪ್ರಬುದ್ಧ ಮತದಾರರು ಈ ಬಾರಿಯ ಚುನಾವಣೆ ಯಲ್ಲಿ ಯಾವುದೇ ಒಬ್ಬ ನಾಯಕನ ಮನೆಯಿಂದ ನಿಂತಿರುವ ವ್ಯಕ್ತಿಗಳ ಪೈಕಿ, ಕೇವಲ ಒಬ್ಬನನ್ನು ಮಾತ್ರ ಗೆಲ್ಲಿಸಿ, ಉಳಿದವರನ್ನು ಮನೆಗೆ ಕಳುಹಿಸುವ ಪ್ರಬುದ್ಧತೆ ಯನ್ನು ತೋರಿಸಬೇಕಾಗಿದೆ. ಸಾಧ್ಯವಾದರೆ, ತಮ್ಮ ಮನೆ ಮಂದಿಯೆಲ್ಲಾ ಚುನಾ ಯಿತ ಪ್ರತಿನಿಧಿಗಳಾಗಬೇಕೆಂದು ಹಾತೊರೆಯುವ ಕುಟುಂಬಗಳ ಎಲ್ಲರನ್ನೂ ಮನೆಗೆ ಕಳುಹಿಸಿ, ಕುಟುಂಬ ರಾಜಕಾರಣಕ್ಕೆ ಕರ್ನಾಟಕದಿಂದಲೇ ಮುಕ್ತಿ ನೀಡು ವಂತಹ ಸಂದೇಶವನ್ನು ರಾಷ್ಟ್ರಕ್ಕೆ ನೀಡಲಿ.

Similar News