ಮೋದಿ ಸರಕಾರದ ಕೃಷಿ ವಿಮಾ ಯೋಜನೆಗಳು: ಕಾರ್ಪೊರೇಟುಗಳಿಗೆ ಒಳ್ಳೆ ಕೊಯ್ಲು?

Update: 2017-07-18 18:42 GMT

ಭಾಗ-2 

ಅಧಿಕೃತ ಮಾಹಿತಿಗಳ ಪ್ರಕಾರ ಇದುವರೆಗೆ ಅಂದರೆ ಒಂದು ವರ್ಷದ ಅವಧಿಯಲ್ಲಿ 21 ರಾಜ್ಯಗಳ ಶೇ. 30ರಷ್ಟು ಬೆಳೆಭೂಮಿಗಳನ್ನೂ 2016ರ ಮಳೆಗಾಲದಲ್ಲಿ (ಖರೀಫ್) ಸುಮಾರು 3.9 ಕೋಟಿ ರೈತರನ್ನೂ (ಹಿಂದಿಗಿಂತ ಕೇವಲ 4 ಪ್ರತಿಶತ ಹೆಚ್ಚು ಅಷ್ಟೆ) ಒಳಗೊಳ್ಳಲಾಗಿದೆ. ಉತ್ತರ ಪ್ರದೇಶ, ರಾಜಸ್ಥಾನಗಳಂತಹ ಕೆಲವು ರಾಜ್ಯಗಳು ಯೋಜನೆಯಲ್ಲಿ ಒಂದಷ್ಟು ಹೊಂದಾಣಿಕೆ ಮಾಡಿ ತಮ್ಮ ಆರ್ಥಿಕ ಹೊರೆಯನ್ನು ಇಳಿಸಿಕೊಂಡಿವೆ ಎನ್ನಲಾಗಿದೆ.

ಆದರೆ ಒಂದು ವರ್ಷದ ಬಳಿಕ ಬೆಳೆ ವಿಮೆ ವಿತರಣೆಯ ಪರಿಸ್ಥಿತಿ ಹೇಗಿದೆ ಎಂದು ನೋಡಹೊರಟರೆ ವಿಮಾ ಕಂಪೆನಿಗಳು ರೈತರಿಂದ ಭಾರೀ ಮೊತ್ತದ ಕಂತುಗಳನ್ನು ಪಡೆದುಕೊಂಡ ಹೊರತಾಗಿಯೂ ಬೇಡಿಕೆಗಳ ಶೇ. 83ರಷ್ಟು ದುಡ್ಡನ್ನು ಪಾವತಿ ಮಾಡದಿರುವ ಆಘಾತಕಾರಿ ಚಿತ್ರಣವೊಂದು ಎದುರಾಗುತ್ತದೆ. ವಿಜ್ಞಾನ ಮತ್ತು ಪರಿಸರ ಪರ ಕೇಂದ್ರ (Centre for Science and Environment) ಮತ್ತು ‘ಡೌನ್ ಟು ಅರ್ಥ್’ ನಿಯತಕಾಲಿಕ ಸೇರಿಕೊಂಡು ಮಹತ್ವಾಕಾಂಕ್ಷಿ ಎಂದು ಟಾಂಟಾಂ ಮಾಡಲಾದ ಈ ಯೋಜನೆಗಳನ್ನು ವಿಶ್ಲೇಷಣೆಗೊಡ್ಡಿ ‘ಭಾರತದ ಪರಿಸರದ ಸ್ಥಿತಿ 2017: ಒಂದು ಅಧ್ಯಯನ’ ಎನ್ನುವ ಜಂಟಿ ವರದಿಯೊಂದನ್ನು ಪ್ರಕಟಿಸಿವೆ.

ವರ್ಷಕ್ಕೊಮ್ಮೆ ಪ್ರಕಟವಾಗುವ ಈ ವರದಿ ದತ್ತಾಂಶಗಳಿಂದ ಕೂಡಿದ್ದು ಅತ್ಯಂತ ವಿಶ್ವಾಸಾರ್ಹವೂ ಆಗಿದೆ. ಈ ಬಾರಿಯ ಅಧ್ಯಯನ ಹೇಳುವಂತೆ ಸಂಕಷ್ಟಕ್ಕೀಡಾದ ರೈತರಿಗೆ ಈ ಯೋಜನೆಗಳಿಂದ ಏನೇನೂ ಪ್ರಯೋಜನವಾಗಿಲ್ಲ. ನಿರ್ದಿಷ್ಟವಾಗಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಹೊಸರೂಪದ ಹವಾಮಾನ ಆಧರಿತ ಬೆಳೆ ವಿಮೆ ಯೋಜನೆಗಳ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ವಿಮಾ ಕಂಪೆನಿಗಳು 2016ರ ಮಳೆಗಾಲದಲ್ಲಿ ರೂ. 4,270.55 ಕೋಟಿ ವಿಮಾ ಕಂತು ಸಂಗ್ರಹಿಸಿವೆ.

ಆದರೆ ಇವು ಪಾವತಿಸಿರುವುದು (2017ರ ಎಪ್ರಿಲ್ ತನಕ) ಕೇವಲ ರೂ. 714.14 ಕೋಟಿ ಅಂದರೆ ಕೇವಲ 17 ಪ್ರತಿಶತ ಬೇಡಿಕೆಗಳನ್ನು. ಒಟ್ಟಾರೆಯಾಗಿ ನೋಡಿದರೆ 2016-17ರಲ್ಲಿ ಸಂಗ್ರಹಿಸಲಾದ ರೂ. 21,500 ಕೋಟಿ ಪೈಕಿ 2017ರ ಎಪ್ರಿಲ್ ತನಕ ರೂ. 714.14 ಕೋಟಿಯಷ್ಟೆ ಪಾವತಿಯಾಗಿದೆ ಎಂದರೆ ಶೇಕಡಾವಾರು 3ಕ್ಕಿಂತಲೂ ಕಮ್ಮಿ ಎಂದಾಯಿತು!

ಪ್ರಧಾನ ಮಂತ್ರಿ ಫಸಲು ವಿಮೆ ಯೋಜನೆಯಲ್ಲಿ ಸದ್ಯ ಇರುವ 10 ಖಾಸಗಿ ವಿಮಾ ಕಂಪೆನಿಗಳು ಕಡಿಮೆ ನಷ್ಟದ ಸಾಧ್ಯತೆಗಳಿರುವ ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿದ್ದರೂ ಅವುಗಳ ಸಾಧನೆ ಕಳಪೆಯಾಗಿದೆ. ಇವು ಒಟ್ಟು ರೂ. 9,041.25 ಕೋಟಿಯಷ್ಟು ವಿಮಾ ಕಂತನ್ನು ಸಂಗ್ರಹಿಸಿವೆಯಾದರೂ (2016ರ ಮಳೆಗಾಲದ ಫಸಲು) ರೂ. 2,324.01 ಕೋಟಿ ಪರಿಹಾರದ ಬೇಡಿಕೆ ಬಂದಾಗ ಕೇವಲ ರೂ. 570.1 ಕೋಟಿಯನ್ನಷ್ಟೆ (ಸುಮಾರು 25%) ಸಂದಾಯ ಮಾಡಿವೆ.

10ರ ಪೈಕಿ 4 ಕಂಪೆನಿಗಳು ಶೇ. 75ರಿಂದ ಶೇ. 100ರಷ್ಟು ಬೇಡಿಕೆಗಳನ್ನು ಚುಕ್ತಾ ಮಾಡಿಲ್ಲ. ಬರಪೀಡಿತ ಮಹಾರಾಷ್ಟ್ರ ಸೇರಿದಂತೆ 3 ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿರುವ ಇಫ್ಕೊ-ಟೋಕಿಯೊ ಕಂಪೆನಿಗೆ ಬಂದಿರುವ ವಿಮಾ ಬೇಡಿಕೆಗಳಲ್ಲಿ ಶೇ. 86ಕ್ಕೂ ಅಧಿಕ ಬೇಡಿಕೆಗಳನ್ನು ಪಾವತಿ ಮಾಡಲಾಗಿಲ್ಲ. ಈ ಯೋಜನೆ ಅಡಿಯಲ್ಲಿ ಎಲ್ಲಾ ಬೇಡಿಕೆಗಳನ್ನು ಚುಕ್ತಾ ಮಾಡಿರುವ ಏಕೈಕ ಸಂಸ್ಥೆ ಎಂದರೆ ಯುನಿವರ್ಸಲ್ ಸೊಂಪೊ ಜಿಐಸಿ (ಕರ್ನಾಟಕದಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿದೆ). ಇನ್ನು ಸರಕಾರಿ ವಿಮಾ ಸಂಸ್ಥೆ ಎಐಸಿಐಎಲ್‌ನ ಕಂತು ಸಂಗ್ರಹ ರೂ. 3,610.78 ಕೋಟಿ ಇದ್ದರೆ ಪಾವತಿ ಮಾಡಿರುವುದು ಬರೀ ಸುಮಾರು ರೂ. 830 ಕೋಟಿ (ಶೇ. 23).

2016ರ ಮಳೆಗಾಲದ ಬಳಿಕ ರೈತರು ಪ್ರಧಾನ ಮಂತ್ರಿ ಫಸಲು ವಿಮಾ ಯೋಜನೆಗೆ ಸ್ಪಂದಿಸಿಲ್ಲ. ಸಾಲಗಾರ ರೈತರ ಸಂಖ್ಯೆಯೂ ಹೆಚ್ಚಾಗಿದೆ. ಈ ರೀತಿಯಾಗಿ ಮಳೆಗಾಲದಲ್ಲಿ ಕಳಪೆ ಸಾಧನೆ ಆಗಿರುವುದನ್ನು ಕಂಡ ಮೋದಿ ಸರಕಾರ ಚಳಿಗಾಲದಿಂದ (ರಬಿ) ನ್ಯಾಷನಲ್ ಇನ್ಶೂರೆನ್ಸ್, ಓರಿಯೆಂಟಲ್ ಇನ್ಶೂರೆನ್ಸ್, ನ್ಯೂ ಇಂಡಿಯ ಇನ್ಶೂರೆನ್ಸ್ ಮತ್ತು ಯುನೈಟೆಡ್ ಇನ್ಶೂರೆನ್ಸ್ ಎಂಬ ಇನ್ನೂ 4 ಸರಕಾರಿ ವಿಮಾ ಸಂಸ್ಥೆಗಳಿಗೆ ಅನುಮತಿ ನೀಡಿದೆ. ಆದರೆ......... ಅವುಗಳ ಪೈಕಿ ನ್ಯಾಷನಲ್ ಇನ್ಶೂರೆನ್ಸ್ ಕಂಪೆನಿಯ ಆರ್ಥಿಕ ಪರಿಸ್ಥಿತಿ ಏನೂ ಚೆನ್ನಾಗಿಲ್ಲ.

ಓರಿಯೆಂಟಲ್ ಇನ್ಶೂರೆನ್ಸ್ ಮತ್ತು ಯುನೈಟೆಡ್ ಇನ್ಶೂರೆನ್ಸ್‌ಗಳಿಗೆ ಮುಖ್ಯಸ್ಥರೇ ಇಲ್ಲ. ಎಐಸಿಎಲ್‌ನ ಮುಖ್ಯಸ್ಥರನ್ನು ಕಳೆದ 6 ವರ್ಷಗಳಲ್ಲಿ 6 ಬಾರಿ ಬದಲಾಯಿಸಲಾಗಿದೆ. ಅದಿಂದು ಬೇರೆಲ್ಲೂ ನೌಕರಿ ಸಿಗಲಾರದವರ ಕೊನೆಯ ಆಶ್ರಯ ಎಂಬಂತಾಗಿದೆ. ಸದ್ಯ ಆರ್ಥಿಕ ಸೇವೆಗಳ ವಿಭಾಗದ ಆರ್ಥಿಕ ಸಲಹೆಗಾರ ಆರ್.ಎನ್. ದುಬೆ ಎಂಬವರನ್ನು ತಾತ್ಕಾಲಿಕವಾಗಿ ನೇಮಕ ಮಾಡಲಾಗಿದೆ. ಇಷ್ಟೇ ಅಲ್ಲ, ಸಂಸ್ಥೆ ತೀವ್ರ ಸಿಬ್ಬಂದಿ ಕೊರತೆಯನ್ನೂ ಎದುರಿಸುತ್ತಿದೆ.

ಕೃಷಿ ವಿಮಾ ಮಾರುಕಟ್ಟೆಯ ಶೇ. 40ರಷ್ಟು ವ್ಯವಹಾರ ಇರುವ ಎಐಸಿಎಲ್‌ನಲ್ಲಿ ಸಿಬ್ಬಂದಿಯ ಸಂಖ್ಯೆ 700 ಇರಬೇಕಾದಲ್ಲಿ ಕೇವಲ 300 ಇದ್ದಾರೆ ಅಂದರೆ ಶೇ. 50ಕ್ಕಿಂತಲೂ ಕಮ್ಮಿ! ಪರಿಣಾಮವಾಗಿ ದತ್ತಾಂಶಗಳಲ್ಲಿ ಸಾಕಷ್ಟು ಎಡವಟ್ಟುಗಳಾಗಿವೆ. ಮತ್ತೊಂದು ವಿಚಿತ್ರ ಏನೆಂದರೆ ಎಐಸಿಎಲ್ ಆಡಳಿತ ಆರ್ಥಿಕ ಸಚಿವಾಲಯದ ಕೈಕೆಳಗಿದ್ದರೆ ಮೇಲ್ವಿಚಾರಣೆಯ ಹೊಣೆ ವಹಿಸಿರುವುದು ಕೃಷಿ ಸಚಿವಾಲಯಕ್ಕೆ! ಇದೆಲ್ಲವನ್ನು ಪರಿಗಣಿಸಿದಾಗ ಮೋದಿ ಸರಕಾರದ ನೂತನ ಕೃಷಿ ವಿಮಾ ಯೋಜನೆಗಳ ಅಸಲಿ ಲಾಭವನ್ನು ಹೊಡೆಯುತ್ತಿರುವುದು ಕಾರ್ಪೊರೇಟು ಕುಳಗಳು ಎಂಬ ಆರೋಪದಲ್ಲಿ ಹುರುಳಿಲ್ಲ ಎನ್ನಲಾಗುವುದಿಲ್ಲ.
(ಆಧಾರ: downtoearth.org.inನಲ್ಲಿ ಜಿತೇಂದ್ರರ ಲೇಖನ ಮತ್ತು ಇತರ ಮೂಲಗಳು)

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News