ಮಾತೆ ಮಹಾದೇವಿ ಅವಿವೇಕಿ ನಿಲುವು ಮುಂದುವರಿಕೆ: ಡಾ.ಚಿದಾನಂದಮೂರ್ತಿ
ಬೆಂಗಳೂರು, ಜು.19: ಬಸವಣ್ಣನವರ ಅಂಕಿತನಾಮ ಕೂಡಲಸಂಗಮದೇವ ಅಲ್ಲ ಲಿಂಗದೇವ ಎಂದು ಮಾತೆ ಮಹಾದೇವಿಯವರು ತಮ್ಮ ಅವಿವೇಕಿ ನಿಲುವನ್ನು ಮುಂದುವರಿಸಿದ್ದಾರೆ ಎಂದು ಹಿರಿಯ ಸಂಶೋಧಕ ಡಾ.ಚಿದಾನಂದಮೂರ್ತಿ ಹೇಳಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂಡಲಸಂಗಮ ಬಸವಣ್ಣನವರ ಅಂಕಿತನಾಮ ಅಲ್ಲ ಲಿಂಗದೇವ ಎಂದು ಹಾಗೂ ಬಸವಣ್ಣನೇ ಲಿಂಗಾಯತ ಧರ್ಮ ಸ್ಥಾಪಕ. ಅವರು ವೀರಶೈವ ಅಲ್ಲವೆಂದು ಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ, ಅಖಿಲ ಭಾರತ ವೀರಶೈವ ಮಹಾಸಭಾದವರು ವೀರಶೈವ ಧರ್ಮವು ಸ್ವತಂತ್ರ ಧರ್ಮವೇ ಹೊರತು ಹಿಂದೂಧರ್ಮದ ಭಾಗವಲ್ಲ. ಹೀಗಾಗಿ ಕೇಂದ್ರ ಸರಕಾರ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವೆಂದು ಘೋಷಣೆ ಮಾಡಬೇಕು ಎಂದು ಒತ್ತಾಯ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದರು. ಬಸವಣ್ಣನ ವಚನಗಳಲ್ಲಿ ಹಲವು ಕಡೆ ವೀರಶೈವ ಪದ ಪ್ರಯೋಗ ಮಾಡಿದ್ದು, ವಚನಗಳಲ್ಲಿ ಅವರು ಉದ್ಧರಿಸಿರುವ ಪ್ರಾಚೀನ ಶ್ಲೋಕಗಳಲ್ಲಿಯೂ ವೀರಶೈವ ಪದವಿದೆ. ಬಸವಣ್ಣ ಲಿಂಗವನ್ನು ಧರಿಸಿದ್ದರಿಂದ ಅವರನ್ನು ಹರಿಹರ ಲಿಂಗವಂತ ಎಂದು ಕರೆಯಲಾಗಿದೆ. ಈ ರೀತಿ ಹಲವಾರು ಆಧಾರಗಳನ್ನು ಗಮನಿಸಿದರೆ ವೀರಶೈವ, ಲಿಂಗಾಯತ, ಲಿಂಗವಂತ ಮೂರು ಪದಗಳು ಸಮಾನಾರ್ಥವಾಗಿದೆ. ಹೀಗಾಗಿ ವೀರಶೈವ ಪಂಥವು ಹನ್ನರಡನೆಯ ಶತಮಾನಕ್ಕಿಂತ ಹಿಂದಿನದು ಎಂದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು.
ಬಸವಣ್ಣ ವೀರಶೈವ ಧರ್ಮದ ತತ್ವಾಚರಣೆಗಳಿಗೆ ಮನಸೋತು ವೀರಶೈವನಾಗಿ ಈ ಪಂಥದ ಚಲನಶೀಲತೆಗೆ ಒಂದು ಹೊಸ ಆಯಾಮ ತಂದುಕೊಟ್ಟರು. ಆದರೆ, ಅವರು ಲಿಂಗಾಯತ ಧರ್ಮ ಸ್ಥಾಪಕ ಎಂಬುದು ಅಪ್ಪಟ ಸುಳ್ಳು. ಹೀಗಾಗಿ ಅನಗತ್ಯವಾಗಿ ದಿಕ್ಕು ತಪ್ಪಿಸುವುದನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.
ಪೇಜಾವರ ಶ್ರೀಗಳು ಉಡುಪಿಯ ಮಠದಲ್ಲಿ ಮುಸ್ಲಿಂರನ್ನು ಅಹ್ವಾನಿಸಿ, ಅವರಿಗೆ ಇಫ್ತಾರ್ ಕೂಟ ವ್ಯವಸ್ಥೆ ಮಾಡಿದ್ದು ಸ್ವಾಗತಾರ್ಹ. ಹಾಗೆಯೇ ಮುಸ್ಲಿಮರು ಕೂಡಾ ಹಿಂದು ಮಠಾಧೀಶರನ್ನು ಮಸೀದಿಗಳಿಗೆ ಆಹ್ವಾನಿಸಿ, ಅಲ್ಲಿ ದೈವ ಸೋತ್ರಕ್ಕೆ ಅವಕಾಶ ನೀಡಬೇಕು ಎಂದ ಅವರು, ಗೋವು ನಮ್ಮ ತಾಯಿಯ ಸಮಾನವಾದುದು. ಸುಪ್ರೀಂ ಕೋರ್ಟ್, ಕೇಂದ್ರ ಹಾಗೂ ರಾಜ್ಯ ಸರಕಾರ ಏನೇ ಹೇಳಲಿ ಗೋವನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದು ಪ್ರತಿಪಾದಿಸಿದರು.