×
Ad

ವರ್ಷಾಂತ್ಯದೊಳಗೆ ನರಸಾಪುರಕ್ಕೆ ಶುದ್ದೀಕರಿಸಿದ ನೀರು: ಕಾನೂನು ಸಚಿವ ಜಯಚಂದ್ರ

Update: 2017-07-19 19:44 IST

ಬೆಂಗಳೂರು,ಜು. 19: ಹೆಬ್ಬಾಳದ ದಿನಂಪ್ರತಿ 3ದಶಲಕ್ಷ ಲೀ., ಕೋರಮಂಗಲ- ಚಲ್ಲಘಟ್ಟ ಕಣಿವೆಯ ದಿನಂಪ್ರತಿ 1.5ದಶಲಕ್ಷ ಲೀ. ಹಾಗೂ ವೃಷಭಾವತಿ ಕಣಿವೆಯ ದಿನಂಪ್ರತಿ 15 ದಶಲಕ್ಷ ಲೀ.ತ್ಯಾಜ್ಯ ನೀರು ಶುದ್ಧೀಕರಣ ಘಟಕ ಯೋಜನೆಯ 10ವರ್ಷ ನಿರ್ವಹಣೆಗೆ ಮೂರು ಪ್ರತ್ಯೇಕ ಟೆಂಡರ್‌ಗೆ ಸಂಪುಟ ಸಭೆ ಅನುಮೋದನೆ ನೀಡಿದೆ.

ಬುಧವಾರ ವಿಧಾನಸೌಧದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಜಯಚಂದ್ರ, ಕೋಲಾರ. ಚಿಕ್ಕಬಳ್ಳಾಪುರ ಹಾಗೂ ಆನೇಕಲ್ ತಾಲೂಕಿನ ಈ ಕಣಿವೆಗಳಿಂದ ನೀರು ಪೂರೈಸುವ ಕಾಮಗಾರಿಗಳು ಈಗಾಗಲೇ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಹೆಬ್ಬಾಳ ಕಣಿವೆಯ ಸ್ಥಾಪನಾ ವೆಚ್ಚ 334 ಕೋಟಿ ರೂ., ನಿರ್ವಹಣಾ ವೆಚ್ಚ 199.96 ಕೋಟಿ ರೂ. ಒಳಗೊಂಡಂತೆ 534.31ಕೋಟಿ ರೂ., ಕೋರಮಂಗಲ-ಚಲ್ಲಘಟ್ಟ ಕಣಿವೆಗೆ 472 ಕೋಟಿ ರೂ.ಹಾಗೂ ವೃಷಭಾವತಿ ಕಣಿವೆಗೆ 656.96ಕೋಟಿ ರೂ.ಮೊತ್ತ ಮಂಜೂರು ಮಾಡಿ, ಸಂಪುಟ ಒಪ್ಪಿಗೆ ನೀಡಿದೆ. ಅಂತೆಯೇ, ಕೋಲಾರ ಜಿಲ್ಲೆಯ ನರಸಾಪುರಕ್ಕೆ ಕೋರಮಂಗಲ-ಚಲ್ಲಘಟ್ಟ ಕಣಿವೆಯಿಂದ ವರ್ಷಾಂತ್ಯದೊಳಗೆ ನೀರು ಒದಗಿಸಲಾಗುವುದು ಎಂದರು.

ಹೆಸರುಘಟ್ಟಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿಗೆ ಹಾಗೂ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ 37.28 ಕೋಟಿ ರೂ.ಅಂದಾಜು ವೆಚ್ಚಕ್ಕೆ ಸಂಪುಟ ಅನುಮೋದನೆ ನೀಡಿದೆ. ಇದರಿಂದ ಕೈಗಾರಿಕಾ ತ್ಯಾಜ್ಯಗಳ ಸಂಸ್ಕರಣೆಗೆ ಅನುಕೂಲವಾಗಲಿದೆ ಎಂದರು. ಕಂದಾಯ ಇಲಾಖೆ, ಬಿಡಿಎ, ಬಿಬಿಎಂಪಿ ಸೇರಿ ಸರಕಾರಿ ಸ್ವಾಮ್ಯದ ಸಂಸ್ಥೆಗಳಿಂದ ಭೂಸ್ವಾಧೀನ ಮಾಡಿಕೊಳ್ಳಲು ಹಾಗೂ ಭೂ ಬ್ಯಾಂಕ್ ಸ್ಥಾಪಿಸಲು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ಕಂದಾಯ, ನಗಾಭಿವೃದ್ಧಿ ಇಲಾಖೆ, ಮೆಟ್ರೋ ರೈಲು ನಿಗಮ, ಬಿಬಿಎಂಪಿ, ಬಿಡಿಎ, ಬೆಂ.ನಗರ ಹಾಗೂ ಬೆಂ.ಗ್ರಾಮಾಂತರ ಜಿಲ್ಲಾಧಿಕಾರಿಗಳು ಈ ಸಮಿತಿಯ ಸದಸ್ಯರಾಗಿರುತ್ತಾರೆ.
ಬೆಂಗಳೂರು ಮಹಾನಗರದ ಮೂಲ ಸೌಲಭ್ಯ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಿರುವ ರಕ್ಷಣಾ ಮಂತ್ರಾಲಯಕ್ಕೆ ಸೇರಿದ ಜಮೀನನ್ನು ನಿಮಯದ ಮೂಲಕ ಪಡೆದುಕೊಳ್ಳಲು ಹಾಗೂ ಸರಕಾರದ ಸ್ವಾಧೀನದಲ್ಲಿರುವ ಭೂಮಿ ರಕ್ಷಣಾ ಇಲಾಖೆಗೆ ಹಸ್ತಾಂತರಿಸಲು ಈ ಸಮಿತಿ ಅಧಿಕಾರ ಹೊಂದಿರುವುದರಿಂದ ಸಂಬಂಧಿತ ಕಾಮಗಾರಿಗಳನ್ನು ಕ್ಷಿಪ್ರವಾಗಿ ಅನುಷ್ಠಾನಗೊಳಿಸಲು ಸಾಧ್ಯ ಎಂದರು.

ತುಮಕೂರು ಜಿಲ್ಲೆಯ ಕಸಬಾ ಹೋಬಳಿಯ ಅಮಲಾಪುರ ಗ್ರಾಮದಲ್ಲಿ ಕೇಂದ್ರ ಸರಕಾರದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ತಂತ್ರಜ್ಞಾನ ಕೇಂದ್ರ ಸ್ಥಾಪಿಸಲು ರಾಜ್ಯ ಸರಕಾರ 15ಎಕರೆ ಜಾಗವನ್ನು ಉಚಿತವಾಗಿ ಒದಗಿಸಲು ಸಂಪುಟ ಸಮ್ಮತಿಸಿದೆ.

ಕುಡಿಯುವ ನೀರು ಯೋಜನೆ: ಕೊಪ್ಪಳ ಜಿಲ್ಲೆ, ಕುಷ್ಟಗಿ, ಯಲಬುರ್ಗಾ ತಾಲೂಕುಗಳಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ಅನುಷ್ಠಾನಕ್ಕೆ 762 ಕೋಟಿ ರೂ.ಪರಿಷ್ಕೃತ ಅಂದಾಜಿಗೆ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News