ರೈತರ ಆರ್ಥಿಕ ಪ್ರಗತಿಗೆ ಹೈನುಗಾರಿಕೆ ಸಹಕಾರಿ: ಎ.ಮಂಜು

Update: 2017-07-19 14:58 GMT

ಬೆಂಗಳೂರು, ಜು.19: ದೇಶದಲ್ಲಿ ಪಶುಸಂಗೋಪನೆ ಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಸಣ್ಣ ಮತ್ತು ಅತಿ ಸಣ್ಣ ರೈತರು ಒಂದಲ್ಲೊಂದು ರೀತಿಯಲ್ಲಿ ಜಾನುವಾರುಗಳನ್ನು ಅವಲಂಬಿಸಿದ್ದಾರೆ ಎಂದು ಪಶುಸಂಗೋಪನಾ ಸಚಿವ ಎ.ಮಂಜು ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಬೀದರಿನ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ಬೆಂಗಳೂರಿನ ಪಶುವೈದ್ಯಕೀಯ ಮಹಾವಿದ್ಯಾಲಯ ಅಭಿವೃದ್ಧಿಪಡಿಸಿರುವ ‘ಡೈರಿ ಕನ್ನಡ’ ಮೊಬೈಲ್ ಆಪ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಜಾನುವಾರುಗಳ ಉತ್ಪಾದಕತೆಯನ್ನು ಸುಧಾರಿಸುವಲ್ಲಿ ಸೂಕ್ತ ಮಾಹಿತಿ ಮತ್ತು ಅವಶ್ಯ ಜ್ಞಾನ ಒದಗಿಸುವುದು ಬಹು ಮುಖ್ಯವಾಗಿದೆ. ದಿನದಿಂದ ದಿನಕ್ಕೆ ರೈತ ಬಾಂಧವರಲ್ಲಿ ಸ್ಮಾರ್ಟ್ ಫೋನಿನ ಬಳಕೆ ಹೆಚ್ಚಾಗಿದ್ದು, ಈ ಸಾಧನದ ಮೂಲಕ ರೈತರಿಗೆ ವೈಜ್ಞಾನಿಕ ಮಾಹಿತಿ ತಲುಪಿಸಲು ಸುಲಭವಾಗುತ್ತದೆ. ಈ ಹಿನ್ನೆಲೆಯಲ್ಲಿ ಹೈನುಗಾರಿಕೆ ಬಗ್ಗೆ ಮಾಹಿತಿ ನೀಡುವ ಮೊಬೈಲ್ ಆಪ್‌ನ್ನು ಸಿದ್ದಪಡಿಸಲಾಗಿದೆ ಎಂದು ಅವರು ಹೇಳಿದರು.

ಹೈನುಗಾರಿಕೆಗೆ ಸೂಕ್ತ ಹಸು ಮತ್ತು ಎಮ್ಮೆ ತಳಿಗಳ ಪರಿಚಯ, ಬೆದೆಯ ಲಕ್ಷಣಗಳು ಮತ್ತು ಹೈನು ರಾಸುಗಳಲ್ಲಿ ಕೃತಕ ಗರ್ಭದಾರಣೆ, ಅಧಿಕ ಹಾಲು ಕೊಡುವ ರಾಸುಗಳ ಆಯ್ಕೆ, ವಸತಿ ವ್ಯವಸ್ಥೆ ಮತ್ತು ವೈಜ್ಞಾನಿಕ ನಿರ್ವಹಣೆ, ರಾಸುಗಳ ಆಹಾರ, ಅವುಗಳಲ್ಲಿ ಕಂಡು ಬರುವ ಮುಖ್ಯ ರೋಗಗಳು ಮತ್ತು ನಿಯಂತ್ರಣ, ಶುದ್ಧ ಹಾಲಿನ ಉತ್ಪಾದನೆ, ಹೈನುಗಾರಿಕೆಯಲ್ಲಿ ಆರ್ಥಿಕತೆ ಮುಂತಾದ ಅಗತ್ಯ ಮಾಹಿತಿಗಳನ್ನು ಈ ಆಪ್‌ನಲ್ಲಿ ನೀಡಲಾಗಿದೆ ಎಂದು ಮಂಜು ತಿಳಿಸಿದರು.

ಈ ಮೊಬೈಲ್ ಆಪ್‌ನಲ್ಲಿ ಆಹಾರ ಕೋಷ್ಠಕ ಎಂಬ ಐಕಾನ್ ನೀಡಲಾಗಿದ್ದು, ಹಾಲಿನ ಇಳುವರಿಗೆ ಅನುಗುಣವಾಗಿ ಕೊಡಬೇಕಾದ ಹಸಿರು ಮೇವು, ಒಣ ಮೇವು ಹಾಗೂ ಧಾಣಿ ಮಿಶ್ರಣಗಳ ಪ್ರಮಾಣ ತಿಳಿಸುತ್ತದೆ. ಈ ಆಪ್‌ನಲ್ಲಿ ತಿಳಿಸಿದ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಹೈನುಗಾರಿಕೆಯಲ್ಲಿ ಹೆಚ್ಚು ಲಾಭಗಳಿಸಲು ಸಹಕಾರಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಮೊಬೈಲ್ ಆಪ್‌ನ್ನು ಜಯಲಕ್ಷ್ಮಿ ಆಗ್ರೋಟೆಕ್ ಸಂಸ್ಥೆಯ ಸಹಯೋಗದೊಂದಿಗೆ ಸಿದ್ಧಪಡಿಸಲಾಗಿದೆ. ಅಂತರ್ಜಾಲದ ಪ್ಲೇ ಸ್ಟೋರ್‌ನಲ್ಲಿ ಡೈರಿ ಕನ್ನಡ(Dairy Kannada) ಎಂದು ನಮೂದಿಸಿ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಒಮ್ಮೆ ಇದನ್ನು ಡೌನ್‌ಲೋಡ್ ಮಾಡಿಕೊಂಡ ನಂತರ ಅಂತರ್ಜಾಲದ ಅವಶ್ಯಕತೆ ಇಲ್ಲದೆ ಶೇರ್‌ಇಟ್ ಮೂಲಕ ಬೇರೆಯವರಿಗೆ ರವಾನಿಸಬಹುದು ಎಂದು ಎಂ.ಮಂಜು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News