‘ಇಂದಿರಾ ಕ್ಯಾಂಟಿನ್’ನಲ್ಲೂ ಅಕ್ರಮ: ಬಿಜೆಪಿ ಆರೋಪ

Update: 2017-07-20 17:04 GMT

ಬೆಂಗಳೂರು, ಜು. 20: ‘ಇಂದಿರಾ ಕ್ಯಾಂಟೀನ್’ ಯೋಜನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ.ಜೆ.ಜಾರ್ಜ್ 65 ಕೋಟಿ ರೂ.ಅವ್ಯವಹಾರ ನಡೆಸಿದ್ದಾರೆ ಎಂದು ಬಿಜೆಪಿ ನಗರ ವಕ್ತಾರ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತಮಿಳುನಾಡು ಸಿಎಂ ಆಗಿದ್ದ ಜಯಲಲಿತಾರ ಅಮ್ಮ ಕ್ಯಾಂಟೀನ್ ಯೋಜನೆ ನಕಲು ಮಾಡಿ, ಸಿದ್ದರಾಮಯ್ಯ ಎರಡನೆ ಅವಧಿಗೆ ಮುಖ್ಯಮಂತ್ರಿ ಕನಸು ಕಾಣುತ್ತಿದ್ದಾರೆ ಎಂದು ದೂರಿದರು. ನಗರದಲ್ಲೆ ಆಧುನಿಕ ತಂತ್ರಜ್ಞಾನದ ಕಟ್ಟಡ ನಿರ್ಮಾಣ ಸಂಸ್ಥೆಗಳಿದ್ದರೂ, ಇಂದಿರಾ ಕ್ಯಾಂಟೀನ್ ನಿರ್ಮಾಣ ಗುತ್ತಿಗೆಯನ್ನು ಕೃಷ್ಣಗಿರಿ ಜಿಲ್ಲೆಯ ಕೆಇಎಫ್ ಸಂಸ್ಥೆಗೆ ಗುತ್ತಿಗೆ ನೀಡಿರುವ ಮೂಲಕ ಕೆಟಿಟಿಟಿಇ ಕಾಯ್ದೆ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು.

ಒಂದು ಚದರವನ್ನು 95 ಸಾವಿರ ರೂ.ನಲ್ಲಿ ನಿರ್ಮಿಸಬಹುದಾಗಿದೆ. ಆದರೆ, 2.9 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಈ ಮೊತ್ತದಲ್ಲೆ ಅಮೃತ ಶಿಲೆಗಳನ್ನು ಬಳಸಿ ಕಟ್ಟಡ ನಿರ್ಮಿಸಬಹುದು ಎಂದ ಅವರು, ಈ ಯೋಜನೆಯಡಿ ಪ್ರತಿ ಕ್ಯಾಂಟಿನ್‌ಗೆ 2 ಲಕ್ಷ ರೂ.ಅಕ್ರಮ ನಡೆಸಿದೆ ಎಂದು ವಾಗ್ದಾಳಿ ನಡೆಸಿದರು.

ದೂರು ದಾಖಲು: ಈ ಅಕ್ರಮಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ, ಎಸಿಬಿಗೆ ದೂರು ನೀಡಲಾಗಿದ್ದು, ನಾಲ್ಕನೆ ಎಸಿಎಂಎಂ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದ ಅವರು, ಈ ಯೋಜನೆ ಟೆಂಡರ್ ಪ್ರಕ್ರಿಯೆ ಸೇರಿದಂತೆ ಇನ್ನಿತರ ವಿವರಗಳ ಬಗ್ಗೆ ಕೂಡಲೇ ಸರಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News