×
Ad

ಕಲಾ ಜಗತ್ತಿಗೆ ನಿಷ್ಕಲ್ಮಶ ಕಲಾಪ್ರೀತಿ ಬೇಕಾಗಿದೆ: ಎಂ.ಎಸ್.ಮೂರ್ತಿ

Update: 2017-07-20 18:01 IST

ಬೆಂಗಳೂರು, ಜು.20: ಕಲಾ ಜಗತ್ತು ಸೃಜನಾತ್ಮಕವಾಗಿ ಬೆಳೆಯಬೇಕಾದರೆ ನಿಷ್ಕಲ್ಮಶ ಕಲಾ ಪ್ರೀತಿ ಅಗತ್ಯವಾಗಿದೆ. ಈ ದಾರಿಯಲ್ಲಿ ಸಾಗಿ ಹೋಗಿರುವ ಹಿರಿಯ ಕಲಾವಿದರನ್ನು ನೆನಪು ಮಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಲಲಿತಾಕಲಾ ಅಕಾಡೆಮಿಯ ಅಧ್ಯಕ್ಷ ಎಂ.ಎಸ್.ಮೂರ್ತಿ ಹೇಳಿದ್ದಾರೆ.
ಗುರುವಾರ ಕರ್ನಾಟಕ ಲಲಿತಕಲಾ ಅಕಾಡೆಮಿ ನಗರದ ನಯನ ಸಭಾಂಗಣದಲ್ಲಿ ಹಿರಿಯ ಕಲಾವಿದ ಎಸ್.ಎಂ.ಪಂಡಿತ್ ಮತ್ತು ಕಲಾ ವಿಮರ್ಶಕ ಬಿ.ವಿ.ಕೆ.ಶಾಸ್ತ್ರಿ ಜನ್ಮ ಶತಮಾನೋತ್ಸವ ಪ್ರಯುಕ್ತ ಆಯೋಜಿಸಿದ್ದ ಕಲಾಶಿಬಿರ, ವಿಚಾರ ಸಂಕಿರಣದಲ್ಲಿ ಹಾಗೂ ವಿಮರ್ಶಾ ಕಮ್ಮಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಸ್ತುತದ ದಿನಗಳಲ್ಲಿ ಸ್ವಹಿತಾಸಕ್ತಿಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಕಲಾ ಜಗತ್ತಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಇಂತಹವರ ಮನಸ್ಥಿತಿಯಿಂದ ಕಲಾ ಕ್ಷೇತ್ರಗಳ ಅಭಿವೃದ್ಧಿಯಾಗುವುದಿಲ್ಲ. ಇದಕ್ಕೆ ಕಡಿವಾಣ ಹಾಕಬೇಕಾದರೆ ನಿಷ್ಕಲ್ಮಶ ಪ್ರೀತಿಯಿಂದ ಚಿತ್ರಕಲಾ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ ಹಿರಿಯರ ಮಾರ್ಗದರ್ಶನ ನಮಗೆ ಅಗತ್ಯವಿದೆ ಎಂದು ತಿಳಿಸಿದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಶಿವರಾಮ ಕಾರಂತರು ಕಲಾ ಜಗತ್ತಿಗೆ ನೀಡಿದ ಕಾಣ್ಕೆ ಎಂದೆಂದಿಗೂ ಮಾದರಿಯಾಗುವಂತಹದ್ದಾಗಿದೆ. ತಮ್ಮ ಸ್ವಂತ ಖರ್ಚಿನಲ್ಲಿ ‘ಅಜಂತಾ ಎಲ್ಲೋರಾ’ ಶಿಲ್ಪಕಲಾ ಕ್ಷೇತ್ರಗಳು ಹಾಗೂ ದೂರದ ಇಂಗ್ಲೆಂಡ್‌ಗೆ ಕಲಾಕ್ಷೇತ್ರಗಳಿಗೆ ತಿರುಗಾಡಿ ‘ಕಲಾ ಪ್ರಪಂಚ’ ಎಂಬ ಕೃತಿಯನ್ನು ರಚಿಸಿಕೊಟ್ಟಿದ್ದಾರೆ. ಇಂತಹ ವ್ಯಕ್ತಿತ್ವಗಳು ಕಲಾವಿದರಿಗೆ ಮಾದರಿಯಾಗಬೇಕು ಎಂದು ಅವರು ಹೇಳಿದರು.

ಕಲಾವಿದರು ಜಾತಿ, ಧರ್ಮ, ಭಾಷೆಯನ್ನು ಮೀರಿ ಚಿಂತಿಸಬೇಕಾಗಿದೆ. ಆಗ ಮಾತ್ರ ಕಲಾಕೃತಿಗಳಲ್ಲಿ ಸೃಜನಾತ್ಮಕತೆ ಹಾಸು ಹೊಕ್ಕಾಗಿರುತ್ತದೆ. ಕಲಾವಿದನ ಬದ್ಧತೆ ಹಾಗೂ ಚಿಂತನಾ ಕ್ರಮವನ್ನು ಆತನ ಕಲಾಕೃತಿಗಳಿಂದ ನೋಡಿ ತಿಳಿಯಬಹುದು. ಈ ನಿಟ್ಟಿನಲ್ಲಿ ಕಲಾವಿದರು ಅತ್ಯಂತ ಜವಾಬ್ದಾರಿಯಿಂದ ಕಲಾಕ್ಷೇತ್ರದಲ್ಲಿ ತೊಡಗಬೇಕು ಎಂದು ಅವರು ಆಶಿಸಿದರು.

ಎಂಇಎಸ್ ಕಾಲೇಜಿನ ಅಧ್ಯಕ್ಷೆ ವಿಮಲಾ ರಂಗಾಚಾರ್ ಮಾತನಾಡಿ, ಕಲಾಕ್ಷೇತ್ರವನ್ನು ಬೆಳಗಿಸಿದ ಹಿರಿಯ ಕಲಾವಿದರ ಅನುಭವ ಹಾಗೂ ಚಿಂತನೆಯನ್ನು ಯುವ ತಲೆಮಾರಿಗೆ ತಲುಪಿಸುವಂತಹ ಕೆಲಸವಾಗಬೇಕು. ಆ ನಿಟ್ಟಿನಲ್ಲಿ ಶಾಲಾ-ಕಾಲೇಜು ಅಂತದಲ್ಲಿ ಹಿರಿಯ ಕಲಾವಿದರ ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಲಲಿತಾ ಅಕಾಡೆಮಿಯ ಮಾಜಿ ಅಧ್ಯಕ್ಷ ನಾಡೋಜ ಡಾ.ಜೆ.ಎಸ್.ಖಂಡೇರಾವ್, ಅನನ್ಯ ಸಂಸ್ಥೆಯ ಮ್ಯಾನೆಂಜಿಗ್ ಟ್ರಸ್ಟಿ ಡಾ.ಅನನ್ಯ ರಾಘವೇಂದ್ರ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News