ಯಡಿಯೂರಪ್ಪನವರದ್ದು ರೈತರ ವಿರೋಧಿ ರಕ್ತ: ಮಧು ಬಂಗಾರಪ್ಪ ವಾಗ್ದಾಳಿ

Update: 2017-07-21 13:38 GMT

ಧಾರವಾಡ, ಜು. 21: ಯಡಿಯೂರಪ್ಪನವರು ಈ ರಾಜ್ಯ ಕಂಡ ಅತ್ಯಂತ ‘ಕಚಡಾ’ ಮುಖ್ಯಮಂತ್ರಿ. ಅವರು ಶಿವಮೊಗ್ಗ ಜಿಲ್ಲೆಯವರೆಂದು ಹೇಳಿಕೊಳ್ಳಲು ನನಗೆ ನಾಚಿಕೆಯಾಗುತ್ತದೆ ಎಂದು ಜೆಡಿಎಸ್ ಶಾಸಕ ಮಧು ಬಂಗಾರಪ್ಪ, ಬಿಎಸ್‌ವೈ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ಜಿಲ್ಲೆಯ ನವಲಗುಂದಲ್ಲಿ ಜೆಡಿಎಸ್ ಪಕ್ಷದಿಂದ ಏರ್ಪಡಿಸಿದ್ದ ರೈತ ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಕಲ್ಲಡ್ಕ ಪ್ರಭಾಕರ್ ಭಟ್ ಬಂಧಿಸಿದರೆ ರಾಜ್ಯಕ್ಕೆ ಬೆಂಕಿ ಬೀಳುತ್ತದೆ’ ಎಂದು ಹೇಳಿಕೆ ನೀಡುವ ಬಿಎಸ್‌ವೈ ನಿಜವಾಗಲೂ ಗಂಡಸೇ ಆಗಿದ್ದರೆ ಅದೇ ಹೇಳಿಕೆಯನ್ನು ನವಲಗುಂದಕ್ಕೆ ಬಂದು ನೀಡಬೇಕು ಎಂದು ಸವಾಲು ಹಾಕಿದರು.

ರಕ್ತದಲ್ಲಿ ಬರೆದು ಕೊಡ್ತೀನಿ ಎಂಬ ಯಡಿಯೂರಪ್ಪನವರ ರಕ್ತವೇ ಸರಿ ಇಲ್ಲ. ಅವರಲ್ಲಿ ಇರುವುದು ರೈತ ವಿರೋಧಿ ರಕ್ತ ಎಂದು ಏಕವಚನದಲ್ಲೆ ಟೀಕಿಸಿದ ಮಧು ಬಂಗಾರಪ್ಪ, ಕಳಸಾ-ಬಂಡೂರಿ ವಿಚಾರದಲ್ಲಿ ಯಡಿಯೂರಪ್ಪ ಮೌನ ವಹಿಸಿರುವುದು ಏಕೆ ಎಂದು ಪ್ರಶ್ನಿಸಿದರು. ರಾಜ್ಯ ಸರಕಾರದ ಮೂಗು ಹಿಡಿದು ರೈತರ ಸಾಲಮನ್ನಾ ಮಾಡಿಸುತ್ತೇನೆಂದು ಹೇಳುವ ಯಡಿಯೂರಪ್ಪ, ಇದೀಗ ಪ್ರಧಾನಿ ನರೇಂದ್ರ ಮೋದಿಯವರ ಮೂಗು ಹಿಡಿದು ರೈತರ ಕೃಷಿ ಸಾಲಮನ್ನಾ ಮಾಡಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಮಧು ಬಂಗಾರಪ್ಪ ಕೇಳಿದರು.

ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡಿಸದಿದ್ದರೆ, ರೈತರು ಅವರ ಮನೆ ಬಾಗಿಲಿಗೆ ಹೋಗಿ ಅವರ ಮೂಗನ್ನು ಹಿಡಿದು ಪ್ರಶ್ನಿಸಲಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು. ಕಣ್ಣೀರು ಸುರಿಸಿ ಅಧಿಕಾರಕ್ಕೆ ಬಂದಿರುವ ಬಿಎಸ್‌ವೈಗೆ ರೈತರ ಕಣ್ಣೀರು ಕಾಣಿಸುತ್ತಿಲ್ಲ ಎಂದು ಗುಡುಗಿದರು.

ಮಾಲಾರ್ಪಣೆ ವಾಗ್ವಾದ: ಹುತ್ಮಾತ ರೈತರ ವೀರಗಲ್ಲಿಗೆ ಮಾಲಾರ್ಪಣೆ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷಾತೀತ ಹೋರಾಟ ಸಮಿತಿ ಹಾಗೂ ಜೆಡಿಎಸ್ ಕಾರ್ಯಕರ್ತರ ಮಧ್ಯೆ ಕೆಲ ಕಾಲ ವಾಗ್ವಾದ ನಡೆಯಿತು. ಬಳಿಕ ಮುಖಂಡರು ಮಾಲಾರ್ಪಣೆ ಮಾಡಿದರು. ಸಮಾವೇಶದಲ್ಲಿ ಶಾಸಕ ಎನ್.ಎಚ್.ಕೋನರೆಡ್ಡಿ, ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸೇರಿದಂತೆ ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News