​ಜೈಲು ಅಧಿಕಾರಿಗಳು ಸಿಎಜಿ ಸೂಚನೆ ಪಾಲಿಸುತ್ತಿಲ್ಲ: ಲೆಕ್ಕಪತ್ರ ಸಮಿತಿ ಅಧ್ಯಕ್ಷ ಆರ್.ಅಶೋಕ್

Update: 2017-07-21 13:40 GMT

ಬೆಂಗಳೂರು, ಜು. 21: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಎಜಿ ವರದಿಯಲ್ಲಿ ಉಲ್ಲೇಖಿಸಿದರೂ, ಆ ಸೂಚನೆಗಳನ್ನು ಪಾಲಿಸುತ್ತಿಲ್ಲ ಎಂದು ವಿಧಾನಸಭೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಡಿಸಿಎಂ ಆರ್.ಅಶೋಕ್ ಆರೋಪಿಸಿದ್ದಾರೆ.


ಶುಕ್ರವಾರ ವಿಧಾನಸೌಧದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾರಾಗೃಹದಲ್ಲಿ ಅಕ್ರಮಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದರು.
2004, 2009 ಹಾಗೂ 2015ರಲ್ಲಿಯೂ ಕಾರಾಗೃಹಗಳಲ್ಲಿನ ಅಕ್ರಮಗಳ ಬಗ್ಗೆ ಸಿಎಜಿ ವರದಿಯಲ್ಲಿ ಉಲ್ಲೇಖಿಸಿದ್ದು, ಸಿಸಿಟಿವಿ ಅಳವಡಿಕೆ ಈವರೆಗೂ ಆಗಿಲ್ಲ ಎಂದ ಅವರು, ಜೈಲಿಗೆ ಮಾದಕ ದ್ರವ್ಯಗಳ ಪೂರೈಕೆಯೂ ನಿಂತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಲು ಇನ್ನೂ ಎಷ್ಟು ಕಾಲಾವಕಾಶ ಬೇಕು ಎಂದು ಪ್ರಶ್ನಿಸಿದರು.
ಸಿಎಜಿ ವರದಿಯಲ್ಲಿನ ಸೂಚನೆ ಪಾಲನೆ ಮಾಡಿದ್ದರೆ ಕೇಂದ್ರ ಕಾರಾಗೃಹದಲ್ಲಿ ಈ ಅಕ್ರಮ ನಡೆಯುತ್ತಿರಲಿಲ್ಲ ಎಂದ ಅಶೋಕ್, ಶಶಿಕಲಾಗೆ ರಾಜಾತಿಥ್ಯ ನೀಡಿದ್ದು ಸೇರಿದಂತೆ ಪರಪ್ಪನ ಅಗ್ರಹಾರ ಜೈಲಿನ ಅಕ್ರಮಗಳ ಬಗ್ಗೆ ಅಲ್ಲಿನ ಸಿಬ್ಬಂದಿ ಸಮಿತಿ ಮುಂದೆ ಒಪ್ಪಿಕೊಂಡಿದ್ದಾರೆಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News