ಖರ್ಗೆ ಸೇಡಿನ ರಾಜಕಾರಣಿಯಲ್ಲ: ನರಹಳ್ಳಿ ಬಾಲಸುಬ್ರಹ್ಮಣ್ಯ
ಬೆಂಗಳೂರು,ಜು. 21: ಘನತೆ ಕಳೆದುಕೊಳ್ಳುತ್ತಿರುವ ರಾಜಕೀಯಕ್ಕ್ಕೆ ಪರ್ಯಾಯ ಚರಿತ್ರೆಯನ್ನು ಸೃಷ್ಟಿಸುವ ವ್ಯಕ್ತಿತ್ವ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರಲ್ಲಿದೆ ಎಂದು ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ತಿಳಿಸಿದ್ದಾರೆ.
ಶುಕ್ರವಾರ ನಗರದ ಗಾಂಧಿ ಭವನದಲ್ಲಿ ಸಪ್ನ ಬುಕ್ ಹೌಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಪ್ರೊ.ಎಚ್.ಟಿ.ಪೋತೆ ಸಂಪಾದಿತ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರ ಕುರಿತಾದ ಲೇಖನಗಳ ಸಂಗ್ರಹ ‘ಬಯಲು ಹೊನ್ನು’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಖರ್ಗೆಯವರ ಐದು ದಶಕಗಳ ಸುದೀರ್ಘ ಪಯಣ ದೇಶದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಬದಲಾವಣೆಗಳ ಪ್ರತೀಕ. ಘನತೆ ಕಳೆದುಕೊಳ್ಳುತ್ತಿರುವ ರಾಜಕೀಯ ಕ್ಷೇತ್ರದಲ್ಲಿ ತಮ್ಮಲ್ಲಿನ ರಾಜಕೀಯ ಘನತೆಯನ್ನು ಕಾಪಾಡಿಕೊಂಡಿದ್ದಾರೆ. ಸೇಡಿನ ರಾಜಕಾರಣ ಮಾಡದೆ, ವಿರೋಧಿಗಳನ್ನು ಗೌರವದಿಂದ ಕಾಣುವ ಸಂಯಮ ಅವರಲ್ಲಿರುವ ಆದರ್ಶ ಎಂದು ನುಡಿದರು. ಅವಮಾನದಿಂದಲ್ಲೇ ತಮ್ಮ ವ್ಯಕ್ತಿತ್ವವನ್ನು ಕಟ್ಟಿಕೊಂಡ ಖರ್ಗೆ, ತಮ್ಮ ರಚನಾತ್ಮಕ ಕ್ರಿಯೆಗಳ ಮೂಲಕ ವಿರೋಧಿಗಳಿಗೆ ತಕ್ಕ ಉತ್ತರ ನೀಡುತ್ತಿದ್ದಾರೆ. ಖರ್ಗೆ ಅವರಿಗೆ ಪದವಿಗಳು ತಾನಾಗಿಯೆ ಒಲಿದು ಬಂದಿವೆ ಹೊರತು ಹೋರಾಟ, ಹುನ್ನಾರ, ಒಳಸಂಚಿನಿಂದ ಪಡೆದಿಲ್ಲ ಎಂದು ಹೇಳಿದರು.
ಉತ್ತರ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ, ಧಾರವಾಡದಲ್ಲಿ ಕೇಂದ್ರಿಯ ವಿವಿ ಹಾಗೂ ಬುದ್ಧ ವಿಹಾರ ನಿರ್ಮಾಣ ಅವರ ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ. ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಅವರು, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸುತ್ತಿರುವುದು ಕನ್ನಡಿಗರ ಹೆಮ್ಮೆ. ಜನರ ಸಮಸ್ಯೆಗಳನ್ನು ಲೋಕಸಭೆಯಲ್ಲಿ ಸಮರ್ಥವಾಗಿ ಮಂಡಿಸುವ ಉತ್ತಮ ಸಂಸದೀಯಪಟು ಎಂದು ಶ್ಲಾಘಿಸಿದರು. ಲೇಖಕ ಪೋತೆ ಅವರು ಒಳ್ಳೆಯ ಪ್ರಯತ್ನ ಮಾಡಿದ್ದಾರೆ. ಈ ಕೃತಿ ರಾಜಕೀಯದಲ್ಲಿ ಪರ್ಯಾಯ ಚರಿತ್ರೆ ರೂಪಿಸಲು ಪ್ರೇರಕವಾಗಲಿ. ರಾಜ್ಯದ ಉತ್ತಮ ರಾಜಕಾರಣಿಗಳ ಸಾಧನೆ ಕುರಿತು ಸೂಕ್ತ ಮಾಹಿತಿಯ ಕೊರತೆಯಿದೆ. ಇಂತಹವರ ಕುರಿತು ಇಂದಿನ ಯುವಕರಿಗೆ ಪರಿಚಯಿಸಲು ಈ ರೀತಿಯ ಪುಸ್ತಕಗಳನ್ನು ಹೊರ ತರುವ ಪ್ರಯತ್ನ ನಡೆಯಬೇಕಿದೆ ಎಂದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಮಾತನಾಡಿ, ದಕ್ಷಿಣ ಭಾರತದಿಂದ ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡವರೆಲ್ಲ ಮದ್ರಾಸಿಗರು ಎಂದು ಗುರುತಿಸಿಕೊಂಡರೆ ಮಲ್ಲಿಕಾರ್ಜುನ ಖರ್ಗೆ ಕನ್ನಡಿಗರೆಂದೇ ಹೆಸರುವಾಸಿಯಾದರು. ರಾಷ್ಟ್ರ ರಾಜಕಾರಣದಲ್ಲಿ ದೀರ್ಘಕಾಲ ಪಾಲ್ಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ ಎಂದು ತಿಳಿಸಿದರು. ಬಯಲು ಹೊನ್ನು ಕೃತಿಯಲ್ಲಿ ಖರ್ಗೆ ಅವರ ಸಂದರ್ಶನ ಇರಬೇಕಿತ್ತು. ಅಸಹಾಯಕರಾಗಿ ಮುನ್ನೆಲೆಗೆ ಬಂದ ಹಾದಿ ಕುರಿತು ಅವರ ಅಭಿಪ್ರಾಯ ದಾಖಲಿಸುವ ಅಗತ್ಯತೆ ಇತ್ತು ಎಂದು ಹೇಳಿದರು.
ಶಿಕ್ಷಣ ತಜ್ಞ ಪ್ರೊ.ಕೆ.ಈ.ರಾಧಾಕೃಷ್ಣ ಮಾತನಾಡಿ, ಖರ್ಗೆ ರಾಷ್ಟ್ರ ಕಂಡ ಶ್ರೇಷ್ಠ ಮುತ್ಸದಿ. ಇವರು 321(ಜೆ) ಕಾಯಿದೆಯನ್ನು ಜಾರಿಗೊಳಿಸದಿದ್ದರೆ ಇಷ್ಟೊತ್ತಿಗೆ ರಾಜ್ಯ ಇಬ್ಬ್ಬಾಗವಾಗುತ್ತಿತ್ತು. ತಮಗೆ ಸಿಕ್ಕ ಸ್ಥಾನಗಳಿಗೆ ಚ್ಯುತಿ ಬಾರದಂತೆ ಕಾಪಾಡಿಕೊಂಡಿದ್ದಾರೆ. ಲೋಕಸಭೆಯಲ್ಲಿನ ಇವರ ಚತುರ ಭಾಷಣ ಕಾಂಗ್ರೆಸ್ಸಿಗರಿಗೆ ಅಲ್ಲದೆ ವಿರೋಧ ಪಕ್ಷಗಳ ನಾಯಕರ ಶ್ಲಾಘನೆಗೆ ಪಾತ್ರವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್, ಲೇಖಕ ಪ್ರೊ.ಎಚ್.ಟಿ.ಪೋತೆ, ಸ್ವಪ್ನ ಬುಕ್ ಹೌಸ್‌ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಸೇರಿದಂತೆ ಇತರರು ಇದ್ದರು.