ಕರವೇ ಕಾರ್ಯಕರ್ತರ ವಿರುದ್ಧ ಮೊಕದ್ದಮೆ ದಾಖಲು
ಬೆಂಗಳೂರು, ಜು.21: ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರೋಧಿಸಿ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರ ಮೇಲೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 36 ಮೊಕದ್ದಮೆಗಳು ದಾಖಲಾಗಿದೆ.
ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಹೇರಿಕೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದ ವಿವಿಧ ಮೆಟ್ರೋ ನಿಲ್ದಾಣಗಳಲ್ಲಿ ಅಳವಡಿಸಿದ್ದ ಹಿಂದಿ ಫಲಕಗಳ ಮೇಲೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂಬಂಧ ಕಾರ್ಯಕರ್ತರ ವಿರುದ್ಧ ನಗರದ ಕಬ್ಬನ್ ಪಾರ್ಕ್, ಹಲಸೂರು ಗೇಟ್, ಉಪ್ಪಾರಪೇಟೆ, ಮಾಗಡಿ ರೋಡ್, ಇಂದಿರಾನಗರ, ರಾಜಾಜಿನಗರ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ 36 ಮೊಕದ್ದಮೆಗಳು ದಾಖಲಿಸಲಾಗಿದೆ. ಕನ್ನಡೇತರ ಐಪಿಎಸ್ ಅಧಿಕಾರಿಗಳ ಒತ್ತಡದಿಂದ ಕನ್ನಡ ಹೋರಾಟಗಾರರ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ ಮೂರರ ಅಡಿ ದೂರು ದಾಖಲಿಸಲಾಗಿದೆ. ಅಲ್ಲದೆ, ಜಾಮೀನು ರಹಿತ ಸೆಕ್ಷನ್‌ಗಳನ್ನು ಹಾಕಿ ಕನ್ನಡ ಹೋರಾಟಗಾರರನ್ನು ಕಟ್ಟಿಹಾಕಲು ಹಿಂದಿ ಭಾಷಿಕ ಐಪಿಎಸ್ ಅಧಿಕಾರಿಗಳು ಷಡ್ಯಂತ್ರ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಜತೆ ಚರ್ಚೆ
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಮೇಲೆ ಮಸಿ ಬಳಿದ ಮೊಕದ್ದಮೆ ದಾಖಲಿಸಿದರೆ ನಮ್ಮದೇನು ತಕರಾರಿಲ್ಲ. ಆದರೆ ಪ್ರಕರಣಕ್ಕೆ ಸಂಬಂಧವೇ ಇಲ್ಲದ ಇತರೆ ಕೇಸುಗಳನ್ನು ದಾಖಲಿಸಿದ್ದಾರೆ. ಬೇಲ್ ಸಿಗದಂತಹ ಕೇಸುಗಳನ್ನು ಹಾಕಿದ್ದಾರೆ. ಕನ್ನಡಿಗರನ್ನ ಕಟ್ಟಿ ಹಾಕುವ ಪ್ರಯತ್ನ ಇದು. ಅಲ್ಲದೆ, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗುವುದು ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ ಹೇಳಿದ್ದಾರೆ.