ಎಪ್ರಿಲ್‌ನಲ್ಲೇ ವಿಧಾನಸಭೆ ಚುನಾವಣೆ: ಸಿಎಂ
ಬೆಂಗಳೂರು, ಜು.21: ಮುಂದಿನ ವಿಧಾನಸಭೆ ಚುನಾವಣೆ ಎಪ್ರಿಲ್‌ನಲ್ಲಿ ನಡೆಯಲಿದೆ. ಈ ಬಗ್ಗೆ ಯಾವುದೇ ಗೊಂದಲ ಬೇಡ. ಈ ವಿಚಾರ ಸಂಬಂಧ ಹೈಕಮಾಂಡ್‌ಗೂ ಮಾಹಿತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ನೂತನ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ನುಡಿದಂತೆ ನಡೆದಿದ್ದು, ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದೇವೆ. ಕೇಂದ್ರ, ರಾಜ್ಯ ಸರಕಾರದ ಸಾಧನೆ ಕುರಿತು ಬಹಿರಂಗ ಚರ್ಚೆಗೆ ಬರಲಿ ಎಂದು ಮತ್ತೊಮ್ಮೆ ಸವಾಲು ಹಾಕಿದರು.
ದಿಟ್ಟವಾಗಿ ಎದುರಿಸಿ: ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಮುಖಂಡರು ರಾಜ್ಯ ಸರಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದು, ಅದನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ದಿಟ್ಟವಾಗಿ ಎದುರಿಸಬೇಕೆಂದು ಸಿಎಂ ಸಿದ್ದರಾಮಯ್ಯ ಸಲಹೆ ಮಾಡಿದರು.
ನಮ್ಮ ಪಕ್ಷದ ಕಾರ್ಯಕರ್ತರು ಎದೆ ಉಬ್ಬಿಸುವ ಕೆಲಸವನ್ನು ರಾಜ್ಯ ಸರಕಾರ ಮಾಡಿದೆಯೇ ಹೊರತು ಯಾವುದೇ ರೀತಿಯಲ್ಲಿಯೂ ಎದೆಗುಂದುವ ಕಾರ್ಯ ಮಾಡಿಲ್ಲ ಎಂದ ಅವರು, ಇಂದಿರಾ ಕ್ಯಾಂಟೀನ್ ವಿಚಾರದಲ್ಲೂ ಬಿಜೆಪಿ ರಾಜಕಾರಣ ಮಾಡುತಿದ್ದು, ಬಡವರಿಗಾಗಿ ರೂಪಿಸಿರುವ ಯೋಜನೆ ವಿಚಾರದಲ್ಲೂ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರಕಾರವನ್ನು ಟೀಕಿಸಲು ಬಿಜೆಪಿಯವರಿಗೆ ಯಾವುದೇ ವಿಷಯಗಳಿಲ್ಲ. ಹೀಗಾಗಿ ಜಾತಿ, ಧರ್ಮದ ಹೆಸರಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ. ಅದನ್ನು ತಡೆಯಲು ಕಾಂಗ್ರೆಸ್ ಕಾರ್ಯಕರ್ತರು ಸಜ್ಜಾಗುವುದು ಇದು ಅತ್ಯಂ ಅವಶ್ಯ ಎಂದು ಸಲಹೆ ಮಾಡಿದರು.
ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸೋಣ. ಹೇಳಿಕೊಳ್ಳುವಂತಹ ಯಾವುದೇ ಸಾಧನೆಯನ್ನು ಬಿಜೆಪಿಯವರು ಮಾಡಿಲ್ಲ. ಹೀಗಾಗಿ ಸರಕಾರದ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಾರೆ. ಅಧಿಕಾರದಲ್ಲಿ ಇದ್ದಾಗ ದಲಿತರಿಗೆ ಬಿಜೆಪಿಯವರು ಏನೂ ಮಾಡಲಿಲ್ಲ. ಈಗ ದಲಿತರ ಮನೆಗೆ ಭೇಟಿ ನೀಡುವ ನಾಟಕ ಆಡುತ್ತಿದ್ದಾರೆಂದು ಟೀಕಿಸಿದರು.
ದಲಿತರ ಬಗ್ಗೆ ಬಿಜೆಪಿಯವರಿಗೆ ಕಾಳಜಿ ಇಲ್ಲ. ಸಾಮಾಜಿಕ ನ್ಯಾಯಕ್ಕೆ, ಜಾತ್ಯತೀತ ವಾದಕ್ಕೆ ಅವರು ಯಾವಾಗಲೂ ವಿರುದ್ಧ. ಅದರಲ್ಲಿ ಬದ್ಧತೆ ಇರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ನೂತನವಾಗಿ ನೇಮಕಗೊಂಡಿರುವ ಎಲ್ಲ ಪದಾಧಿಕಾರಿಗಳು ಜವಾಬ್ದಾರಿ ಸಮರ್ಥವಾಗಿ ನಿರ್ವಹಿಸಬೇಕೆಂದು ಸೂಚಿಸಿದರು.
ಇದು ಚುನಾವಣಾ ವರ್ಷ. ಹೀಗಾಗಿ ಪದಾಧಿಕಾರಿಗಳ ಮೇಲೆ ನಿರೀಕ್ಷೆ ಹೆಚ್ವಿದೆ. ನಮ್ಮ ಮುಂದೆ ಇರುವ ಸವಾಲು ಎಂದರೆ ಪಕ್ಷ ಬಲಪಡಿಸುವುದು, ಮತ್ತೆ ಅಧಿಕಾರಕ್ಕೆ ತರುವುದು. ರಾಜ್ಯಕ್ಕೆ ಬಂದಿರುವ ಎಐಸಿಸಿ ಪದಾಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿರುವುದು ವಿಪಕ್ಷಗಳಲ್ಲಿ ನಡುಕ ಸೃಷ್ಟಿಸಿದೆ. ಚುನಾವಣೆ ವಿಷಯದಲ್ಲಿ ವಿಪಕ್ಷಗಳು ಗೊಂದಲ ಸೃಷ್ಟಿ ಮಾಡುತ್ತಿವೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ