ಸಿಬಿಐ ತನಿಖೆಗೆ ಕೋರಿ ಬಾಂಬ್ ನಾಗ ಸಲ್ಲಿಸಿದ್ದ ಅರ್ಜಿ ವಜಾ
ಬೆಂಗಳೂರು, ಜು.21: ರಾಜ್ಯದ ಪೊಲೀಸರು ತಮ್ಮ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಹೀಗಾಗಿ, ತನ್ನ ವಿರುದ್ಧದ ಪ್ರಕರಣಗಳನ್ನು ಸಿಬಿಐಗೆ ನೀಡುವಂತೆ ಕೋರಿ ಬಿಬಿಎಂಪಿ ಮಾಜಿ ಸದಸ್ಯ, ರೌಡಿ ಶೀಟರ್ ಬಾಂಬ್ ನಾಗ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ್‌ಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು. ತನ್ನ ವಿರುದ್ಧ ದುರುದ್ದೇಶಪೂರ್ವಕವಾಗಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದು ರಾಜಕೀಯವಾಗಿ ತುಳಿಯುವ ಪ್ರಯತ್ನ ಎಂದು ವಾದಿಸಿ ರೌಡಿ ಶೀಟರ್ ಬಾಂಬ್ ನಾಗರಾಜ್ ಅರ್ಜಿ ಸಲ್ಲಿಸಿದ್ದ. ಅಲ್ಲದೆ, ನನ್ನ ವಿರುದ್ಧ ಕೆಂಗೇರಿ, ಬಾಣಸವಾಡಿ, ಶ್ರೀರಾಮಪುರದಲ್ಲಿ ಒಟ್ಟು 9 ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಬಾಂಬ್ ನಾಗ ಅರ್ಜಿಯಲ್ಲಿ ತಿಳಿಸಿದ್ದಾನೆ.
ಇಂತಹ ಪ್ರಕರಣಗಳನ್ನೆಲ್ಲಾ ಸಿಬಿಐಗೆ ನೀಡಲು ಅಸಾಧ್ಯ ಎಂದು ನ್ಯಾ. ಅರವಿಂದ್‌ಕುಮಾರ್ ಅವರಿದ್ದ ಪೀಠ ಬಾಂಬ್ ನಾಗನ ಅರ್ಜಿಯನ್ನು ವಜಾಗೊಳಿಸಿದೆ. ನಾಗನ ಮನೆಯ ಮೇಲೆ ದಾಳಿ ಮಾಡಿದ್ದ ಹೆಣ್ಣೂರು ಪೊಲೀಸರು 14 ಕೋಟಿ ಹಳೇ ನೋಟುಗಳನ್ನು ವಶಪಡಿಸಿಕೊಂಡಿದ್ದರು. ಬ್ಲಾಕ್ ಅಂಡ್ ವೈಟ್ ದಂಧೆ ನಡೆಸುತ್ತಿದ್ದ ನಾಗನ ವಿರುದ್ಧ ಪ್ರಕರಣ ದಾಖಲಾಗಿತ್ತು.