ಕಶ್ಯಪ್, ಸಮೀರ್, ಪ್ರಣಯ್ ಕ್ವಾರ್ಟರ್ ಫೈನಲ್‌ಗೆ

Update: 2017-07-21 18:31 GMT


ನ್ಯೂಯಾರ್ಕ್, ಜು.21: ಭಾರತದ ಶಟ್ಲರ್‌ಗಳಾದ ಪಿ.ಕಶ್ಯಪ್, ಸಮೀರ್ ವರ್ಮ ಹಾಗೂ ಎಚ್.ಎಸ್. ಪ್ರಣಯ್ 120,000 ಯುಎಸ್ ಡಾಲರ್ ಬಹುಮಾನ ಮೊತ್ತದ ಯುಎಸ್ ಓಪನ್ ಗ್ರಾನ್‌ಪ್ರಿ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ಗುರುವಾರ ನಡೆದ ಪುರುಷರ ಸಿಂಗಲ್ಸ್‌ನ ಎರಡನೆ ಸುತ್ತಿನ ಪಂದ್ಯ ದಲ್ಲಿ ಹಂಗೇರಿಯದ ಗೆರ್ಗ್‌ಲಿ ಕ್ರೌಸೆಝ್ ಅವರು ಎರಡನೆ ಗೇಮ್ ಪೂರ್ಣ ಗೊಳ್ಳುವ ಮೊದಲೇ ಗಾಯಗೊಂಡು ನಿವೃತ್ತಿಯಾದರು. ಕ್ರೌಸೆಝ್ ನಿವೃತ್ತಿ ಯಾದಾಗ ಕಶ್ಯಪ್ 21-18, 17-6 ಅಂತರದ ಮುನ್ನಡೆಯಲ್ಲಿದ್ದರು.

ಅದೇ ದಿನ ನಡೆದ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಶ್ರೀಲಂಕಾದ ನಿಲುಕಾ ಕರುಣರತ್ನೆ ಅವರನ್ನು 21-19, 21-10 ಗೇಮ್‌ಗಳ ಅಂತರ ದಿಂದ ಮಣಿಸಿರುವ ಕಶ್ಯಪ್ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಕಶ್ಯಪ್ ಮುಂದಿನ ಸುತ್ತಿನಲ್ಲಿ ಸಹ ಆಟಗಾರ ಹಾಗೂ 5ನೆ ಶ್ರೇಯಾಂಕದ ಸಮೀರ್ ವರ್ಮರನ್ನು ಎದುರಿಸಲಿದ್ದಾರೆ. ವರ್ಮ ಕ್ರೊಯೇಷಿಯದ ರೊನಿಮಿರ್ ಡುರ್ಕಿಂಜಾಕ್ ಹಾಗೂ ಬ್ರೆಝಿಲ್‌ನ ಗೊರ್ ಕಾಯೆಲ್ಹೊರನ್ನು ಮಣಿಸಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ದ್ವಿತೀಯ ಸುತ್ತಿನ ಪಂದ್ಯದಲ್ಲಿ ಸಮೀರ್ ಕ್ರೊಯೇಷಿಯದ ರೊನಿಮಿರ್‌ರನ್ನು 21-19, 25-27, 21-15 ಗೇಮ್‌ಗಳ ಅಂತರ ದಿಂದ ಮಣಿಸಿದರು.
ಸಮೀರ್ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ 9ನೆ ಶ್ರೇಯಾಂಕದ ಕೊಯೆ ಲ್ಹೊರನ್ನು 18-21, 21-14, 21-18 ಗೇಮ್‌ಗಳಿಂದ ಮಣಿಸಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಇದೇ ವೇಳೆ, ದ್ವಿತೀಯ ಶ್ರೇಯಾಂಕದ ಎಚ್.ಎಸ್.ಪ್ರಣಯ್ ಐರ್ಲೆಂಡ್‌ನ ಜೊಶುವಾ ಮಗೀ ಅವರನ್ನು 21-13, 21-17ರಿಂದ ಸೋಲಿಸಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ತಲುಪಿದರು.

ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಹಾಲೆಂಡ್‌ನ ಮಾರ್ಕ್ ಕಾಲ್ಝೌರನ್ನು 21-8, 14-21, 21-16 ಗೇಮ್‌ಗಳ ಅಂತರದಿಂದ ಸೋಲಿಸಿದ್ದಾರೆ. ಪ್ರಣಯ್ ಮುಂದಿನ ಸುತ್ತಿನಲ್ಲಿ ಜಪಾನ್‌ನ 8ನೆ ಶ್ರೇಯಾಂಕದ ಕಾಂಟಾ ಸುನೆಯಮರನ್ನು ಎದುರಿಸಲಿದ್ದಾರೆ.
ಪುರುಷರ ಡಬಲ್ಸ್‌ನಲ್ಲಿ ಭಾರತದ ಮನು ಅತ್ರಿ ಹಾಗೂ ಬಿ. ಸುಮೀತ್ ರೆಡ್ಡಿ ಇಂಡೋನೇಷ್ಯದ ಹೆಂಡ್ರಾ ತಾಂಡ್‌ಜಯ ಹಾಗೂ ಅಂಡ್ರೊ ಯುನಾಟೊರನ್ನು 21-16, 21-9 ಅಂತರದಿಂದ ಮಣಿಸಿ ದ್ದಾರೆ. ಮುಂದಿನ ಸುತ್ತಿನಲ್ಲಿ ಜಪಾನ್‌ನ ಹಿರೊಕಿ ಒಕಮುರ ಹಾಗೂ ಮಸಯುಕಿ ಒನೊಡೆರಾರನ್ನು ಎದುರಿಸಲಿದ್ದಾರೆ.
ಹರ್ಷಿಲ್ ಡ್ಯಾನಿ, ಶ್ರೀಕೃಷ್ಣ ಪ್ರಿಯಾ, ರಿತುಪರ್ಣೊ ದಾಸ್ ಅವರ ಸಿಂಗಲ್ಸ್ ಸವಾಲು ಅಂತ್ಯಗೊಂಡಿದೆ.

ಹರ್ಷಿಲ್ ವಿಯೇಟ್ನಾಂನ ಟಿಯೆನ್ ಮಿನ್ ಗುಯೆನ್ ವಿರುದ್ಧ 27-25, 21-9 ರಿಂದಲೂ, ಶ್ರೀಕೃಷ್ಣಪ್ರಿಯಾ ಕೊರಿಯಾದ ಜಾಂಗ್ ಮಿ ಲೀ ವಿರುದ್ಧ 11-21, 10-21ರಿಂದಲೂ, ರಿತುಪರ್ಣೊ ಡೆನ್ಮಾರ್ಕ್‌ನ ನಟಾಲಿಯಾ ವಿರುದ್ಧ 15-21, 20-22 ರಿಂದ ಸೋತಿದ್ದಾರೆ.

ಪುರುಷರ ಡಬಲ್ಸ್ ಜೋಡಿ ಫ್ರಾನ್ಸಿಸ್ ಅಲ್ವಿನ್ ಹಾಗೂ ತರುಣ್ ಕೋನಾ ಜಪಾನ್‌ನ ಹಿರೊಕಿ ಒಕಮುರಾ ಹಾಗೂ ಮಸಯುಕಿ ಒಂಡೆರಾ ವಿರುದ್ಧ 19-21, 21-9, 14-21 ಅಂತರದಿಂದ ಸೋತಿದ್ದಾರೆ.
ಮಹಿಳೆಯರ ಡಬಲ್ಸ್ ಜೋಡಿ ಮೇಘನಾ ಹಾಗೂ ಪೂರ್ವಿ ಶಾರಾಮ್ ಜಪಾನ್‌ನ ಮಯು ಮಟ್ಸುಮೊಟೊ ಹಾಗೂ ವಕಾನ ನಗಾಹರಾ ವಿರುದ್ಧ 18-21, 9-21 ಗೇಮ್‌ಗಳ ಅಂತರದಿಂದ ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News