ಅಭ್ಯಾಸ ಪಂದ್ಯದಲ್ಲಿ ರಾಹುಲ್ ಅರ್ಧಶತಕ

Update: 2017-07-21 18:35 GMT

ಕೊಲಂಬೊ, ಜು.21: ಇಲ್ಲಿ ಶುಕ್ರವಾರ ಆರಂಭಗೊಂಡ ಮಂಡಳಿ ಅಧ್ಯಕ್ಷರ ಇಲೆವೆನ್ ವಿರುದ್ಧ ಎರಡು ದಿನಗಳ ಅಭ್ಯಾಸ ಪಂದ್ಯದಲ್ಲಿ ಭಾರತದ ಆರಂಭಿಕ ದಾಂಡಿಗ ಕೆ.ಎಲ್.ರಾಹುಲ್ ಅರ್ಧಶತಕ ದಾಖಲಿಸುವ ಮೂಲಕ ಫಿಟ್‌ನೆಸ್ ಸಮಸ್ಯೆಯಿಂದ ಹೊರಬಂದಿರುವುದನ್ನು ಸಾಬೀತು ಪಡಿಸಿದ್ದಾರೆ.

ಗಾಯದಿಂದ ಕಳೆದ ಮೂರು ತಿಂಗಳಿನಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ಹೊರಗುಳಿದಿದ್ದ ರಾಹುಲ್ ಅವರು 58 ಎಸೆತಗಳಲ್ಲಿ 7 ಬೌಂಡರಿಗಳ ಸಹಾಯದಿಂದ 54 ರನ್ ಗಳಿಸಿ ಔಟಾದರು.

ರಾಹುಲ್‌ರ ಅರ್ಧಶತಕದ ನೆರವಿನಲ್ಲಿ ಭಾರತ 30 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 135 ರನ್ ಗಳಿಸಿದೆ. ನಾಯಕ ವಿರಾಟ್‌ಕೊಹ್ಲಿ ಔಟಾಗದೆ 34 ರನ್ ಮತ್ತು ಅಜಿಂಕ್ಯ ರಹಾನೆ ಔಟಾಗದೆ 30 ರನ್ ಗಳಿಸಿದ್ದಾರೆ.

ಶಿಖರ್ ಧವನ್ ಬದಲಿಗೆ ರಾಹುಲ್ ಜೊತೆ ಇನಿಂಗ್ಸ್ ಆರಂಭಿಸಿದ ಅಭಿನವ್ ಮುಕುಂದ್ (0) ಮೊದಲ ಓವರ್‌ನಲ್ಲಿ ಖಾತೆ ತೆರೆಯದೆ ವಿಶ್ವ ಫೆರ್ನಾಂಡೊಗೆ ವಿಕೆಟ್ ಒಪ್ಪಿಸಿದರು. ಚೇತೇಶ್ವರ ಪೂಜಾರ 12 ರನ್ ಗಳಿಸಿ ಫೆರ್ನಾಂಡೊ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

ಇದಕ್ಕೂ ಮೊದಲು ಶ್ರೀಲಂಕಾದ ಮಂಡಳಿ ಅಧ್ಯಕ್ಷರ ಇಲೆವೆನ್ 55.5 ಓವರ್‌ಗಳಲ್ಲಿ 187 ರನ್‌ಗಳಿಗೆ ಆಲೌಟಾಗಿತ್ತು.ಲಂಕಾದ ಧನುಶ್ಕ ಗುಣತಿಲಕ (74)ಮತ್ತು ಲಹಿರು ತಿರಿಮನ್ನೆ (59 ) ಅರ್ಧಶತಕ ಗಳಿಸಿದರು. ಇವರನ್ನು ಹೊರತುಪಡಿಸಿದರೆ ಸಂದುನ್ ವೀರಕ್ಕೊಡಿ(10) ಎರಡಂಕೆಯ ಸ್ಕೋರ್ ದಾಖಲಿಸಿದರು. ಭಾರತದ ಕುಲದೀಪ್ 6.5 ಓವರ್‌ಗಳಲ್ಲಿ 14ಕ್ಕೆ 4 ವಿಕೆಟ್, ರವೀಂದ್ರ ಜಡೇಜ 9 ಓವರ್‌ಗಳಲ್ಲಿ 31ಕ್ಕೆ 3 ವಿಕೆಟ್, ಮುಹಮ್ಮದ್ ಶಮಿ 5 ಓವರ್‌ಗಳಲ್ಲಿ 9 ರನ್‌ಗೆ 2 ವಿಕೆಟ್ ಉಡಾಯಿಸಿದರು. ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 10 ಓವರ್‌ಗಳಲ್ಲಿ 34 ರನ್ ನೀಡಿದರೂ ವಿಕೆಟ್ ಪಡೆಯದೆ ಕೈಸುಟ್ಟುಕೊಂಡರು.ಇಶಾಂತ್ ಶರ್ಮ, ಉಮೇಶ್ ಯಾದವ್, ಭುವನೇಶ್ ಕುಮಾರ್ ಮತ್ತು ಹಾರ್ದಿಕ್ ಪಾಂಡ್ಯರಿಗೂ ವಿಕೆಟ್ ದೊರೆಯಲಿಲ್ಲ.

ಸಂಕ್ಷಿಪ್ತ ಸ್ಕೊರ್ ವಿವರ

ಶ್ರೀಲಂಕಾ ಮಂಡಳಿ ಅಧ್ಯಕ್ಷರ ಇಲೆವೆನ್ 55.5 ಓವರ್‌ಗಳಲ್ಲಿ ಆಲೌಟ್ 187 (ಗುಣತಿಲಕ 74, ತಿರಿಮನ್ನೆ 59; ಕುಲದೀಪ್ 14ಕ್ಕೆ 4).
ಭಾರತ 30 ಓವರ್‌ಗಳಲ್ಲಿ 135/3 (ರಾಹುಲ್ 54, ಕೊಹ್ಲಿ ಔಟಾಗದೆ 34; ಫೆರ್ನಾಂಡೊ 21ಕ್ಕೆ 2)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News