ಯುದ್ಧ ನಡೆದರೆ ಭಾರತದ ಶಸ್ತ್ರಾಸ್ತ್ರ ಎಷ್ಟು ದಿನಕ್ಕೆ ಖಾಲಿಯಾಗಲಿದೆ?

Update: 2017-07-22 07:27 GMT

ಹೊಸದಿಲ್ಲಿ, ಜು.22: ಯುದ್ಧ ನಡೆದಿದ್ದೇ ಆದಲ್ಲಿ ಭಾರತೀಯ ಸೇನೆಗೆ ಅತ್ಯಗತ್ಯವಾದ 152 ವಿಧದ ಶಸ್ತ್ರಾಸ್ತ್ರಗಳಲ್ಲಿ 61 ವಿಧದ ಶಸ್ತ್ರಾಸ್ತ್ರಗಳು ಕೇವಲ ಹತ್ತೇ ದಿನಗಳಲ್ಲಿ ಖಾಲಿಯಾಗಬಹುದು ಎಂದು ಸಂಸತ್ತಿನ ಮುಂದೆ ಮಂಡಿಸಲಾಗಿರುವ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವರದಿಯಲ್ಲಿ ತಿಳಿಸಲಾಗಿದೆ. ಭಾರತದ ಸೇನೆಯ ಬಳಿ ಸಂಗ್ರಹವಿರುವ ಶಸ್ತ್ರಾಸ್ತ್ರಗಳ ಪೈಕಿ ಶೇ.26ರಷ್ಟು ಅಂದರೆ 31 ವಿಧದ ಶಸ್ತ್ರಾಸ್ತ್ರಗಳ ಸಂಗ್ರಹ ಸಮಾಧಾನಕರವಾಗಿದೆ ಎಂದೂ ಅದು ತಿಳಿಸಿದೆ.

ನಿಯಮಗಳ ಪ್ರಕಾರ ಭಾರತದ ಮಿಲಿಟರಿ 20 ದಿನಗಳ ಯುದ್ಧಕ್ಕೆ ಸಾಕಾಗುಷ್ಟು ಶಸ್ತ್ರಾಸ್ತ್ರ ಹೊಂದಿರಬೇಕಾಗಿದೆ. ಆದರೆ ಹಿಂದೆ ಭಾತೀಯ ಮಿಲಿಟರಿಯು ವಾರ್ ವೆಸ್ಟೇಜ್ ರಿಸರ್ವ್ ಎಂದು ಹೇಳಲಾಗುವ ಹಾಗೂ 40 ದಿನಗಳ ಯುದ್ಧಕ್ಕೆ ಅತ್ಯಗತ್ಯವಾದ ಶಸ್ತ್ರಾಸ್ತ್ರ, ಇತರ ಅಗತ್ಯ ಪರಿಕರಗಳನ್ನು ಹೊಂದಿರಬೇಕಿತ್ತು. ಆದರೆ 1999ರಲ್ಲಿ 20 ದಿನಗಳಿಗೆ ಅಗತ್ಯವಾದ ವಾರ್ ವೇಸ್ಟೆಜ್ ರಿಸರ್ವ್ ಹೊಂದಬೇಕೆಂದು ನಿಯಮಗಳಲ್ಲಿ ಬದಲಾವಣೆ ಮಾಡಲಾಗಿತ್ತು.

ಸದ್ಯ ಯುದ್ಧದ ಸಮಯ ಅತ್ಯಗತ್ಯವಾದ 152 ವಿಧದ ಶಸ್ತ್ರಾಸ್ತ್ರಗಳಲ್ಲಿ ಭಾರತದ ಬಳಿ ಕೇವಲ 31 ವಿಧದ ಶಸ್ತ್ರಾಸ್ತ್ರಗಳು 40 ದಿನಗಳಿಗೆ ಬೇಕಾಗುವಷ್ಟಿದ್ದರೆ, 12 ಶಸ್ತ್ರಾಸ್ತ್ರಗಳು 30ರಿಂದ 40 ದಿನಗಳವರೆಗೆ ಸಾಕಾಗಬಹುದು. ಉಳಿದಂತೆ 26 ವಿಧದ ಶಸ್ತ್ರಾಸ್ತ್ರಗಳು 20 ದಿನಗಳಿಗಿಂತ ಸ್ವಲ್ಪ ಹೆಚ್ಚು ದಿನಗಳಿಗೆ ಸಾಕಾಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕೆಲವೊಂದು ಅತ್ಯಂತ ಅಗತ್ಯ ಶಸ್ತ್ರಾಸ್ತ್ರಗಳ ಸಂಗ್ರಹದಲ್ಲಿ ಸುಧಾರಣೆಯಾಗಿದ್ದರೂ ಇನ್ನು ಕೆಲವು ವಿಭಾಗಗಳಲ್ಲಿ ಸುಧಾರಣೆ ಹೇಳಿಕೊಳ್ಳುವಂತಹುದ್ದಾಗಿಲ್ಲ ಎಂದಿದೆ.

ಶಸ್ತ್ರಾಸ್ತ್ರಗಳ ಭಂಡಾರ ಹೆಚ್ಚಿಸುವ ಉದ್ದೇಶದಿಂದ ಹಿಂದಿನ ಯುಪಿಎ ಸರಕಾರ ಅಮ್ಯುನಿಷನ್ ರೋಡ್ ಮ್ಯಾಪ್ ತಯಾರಿಸಿ ಶಸ್ತ್ರಾಸ್ತ್ರ ಸಂಗ್ರಹವನ್ನು 2015ರೊಳಗಾಗಿ ಹೆಚ್ಚಿಸಲು ಕ್ರಮ ಕೈಗೊಂಡಿದ್ದರೂ, ಮಾರ್ಚ್ 2013ರಿಂದ ಶಸ್ತ್ರಾಸ್ತ್ರ ಸಂಗ್ರಹದಲ್ಲಿ ಮಹತ್ತರ ಸುಧಾರಣೆಯೇನೂ ಆಗಿಲ್ಲ ಎಂದು ವರದಿ ಹೇಳಿದೆ.

ಶಸ್ತ್ರಾಸ್ತ್ರಗಳ ಕೊರತೆಯಿಂದ ಸೈನಿಕರ ತರಬೇತಿ ಬಾಧಿತ: ಸಿಎಜಿ ವರದಿಯ ಪ್ರಕಾರ ಸೇನಾ ಮುಖ್ಯ ಕಾರ್ಯಾಲಯವು ಸೈನಿಕರ ತರಬೇತಿ ಮೇಲೆ ಕೆಲವೊಂದು ನಿರ್ಬಂಧಗಳನ್ನು ಹೇರಿದೆ. 2016ರಲ್ಲಿ ತರಬೇತಿಗೆ ಅಗತ್ಯವಾದ 24 ವಿಧದ ಶಸ್ತ್ರಾಸ್ತ್ರಗಳಲ್ಲಿ ಕೇವಲ 3 ಮಾತ್ರ ಐದು ದಿನಗಳಿಗೂ ಸ್ವಲ್ಪ ಹೆಚ್ಚು ಸಮಯ ಲಭ್ಯವಿತ್ತೆನ್ನಲಾಗಿದೆ. ಶೇ.88ರಷ್ಟು ಶಸ್ತ್ರಾಸ್ತ್ರಗಳು ಅಗತ್ಯ ಪ್ರಮಾಣಕ್ಕಿಂತ ತೀರಾ ಕಡಿಮೆಯಾಗಿತ್ತು. ಶಸ್ತ್ರಾಸ್ತ್ರಗಳ ಕೊರತೆಯ ಹಿನ್ನೆಲೆಯಲ್ಲಿ ಇತ್ತೀಚೆಗೆ ಸರಕಾರವು ಸೇನಾ ಉಪ ಮುಖ್ಯಸ್ಥರಿಗೆ ತುರ್ತಾಗಿ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ಖರೀದಿಸುವ ಅಧಿಕಾರ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News