×
Ad

ಆರ್‌ಟಿಐ ಕಾಯ್ದೆ ದುರುಪಯೋಗ: ಸಿದ್ದರಾಮಯ್ಯ ವಿಷಾದ

Update: 2017-07-22 17:43 IST

ಬೆಂಗಳೂರು, ಜು.22: ರಾಜ್ಯದಲ್ಲಿರುವ ಕೆಲವು ಸುಳ್ಳುಗಾರರಿಂದ ಆರ್‌ಟಿಐ ಕಾಯ್ದೆ ದುರುಪಯೋಗವಾಗುತ್ತಿದ್ದು, ಸರಕಾರದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಾದಿಸಿದ್ದಾರೆ.

ಶನಿವಾರ ಬಿಬಿಎಂಪಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಮಾಗಡಿ ಮುಖ್ಯರಸ್ತೆಯ ಕರ್ನಾಟಕ ಹೌಸಿಂಗ್ ಬೋರ್ಡ್ ಬಳಿ ಸುಮಾರು 24ಕೋಟಿ ರೂ. ವೆಚ್ಚದಲ್ಲಿ ನಿಮಾರ್ಣಗೊಂಡಿರುವ ‘ಕೆಳ ಸೇತುವೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚೆಗೆ ಆರ್‌ಟಿಐ ಕಾಯ್ದೆಯನ್ನು ದುರುಪಯೋಗ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಣ ಮಾಡುವುದಕ್ಕೆ ಹಾಗೂ ಬೆದರಿಕೆ ಹಾಕವುದಕ್ಕೆ ಆರ್‌ಟಿಐನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಂತಹ ನಕಲಿ ಆರ್‌ಟಿಐ ಕಾರ್ಯಕರ್ತರ ವಿರುದ್ಧ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು. ಸಾಧ್ಯವಾದರೆ ಇವರ ವಿರುದ್ಧ ಪ್ರಕರಣಗಳನ್ನು ದಾಖಲಿಸಬೇಕು ಎಂದು ಅವರು ಸಲಹೆ ನೀಡಿದರು.

ಎನ್.ಆರ್.ರಮೇಶ್ ವಿರುದ್ಧ ಪ್ರಕರಣ: ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಸುಳ್ಳು ಆರೋಪ ಮಾಡಿರುವ ಬಿಜೆಪಿ ನಗರ ವಕ್ತಾರ ಎನ್.ಆರ್.ರಮೇಶ್ ವಿರುದ್ಧ ಸಾರ್ವಜನಿಕರೇ ದೂರು ದಾಖಲಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬಡವರು ಕಡಿಮೆ ದರದಲ್ಲಿ ಮೂರು ಹೊತ್ತು ಊಟ ಮಾಡಲು ಅನುಕೂಲವಾಗಲೆಂದು ಇಂದಿರಾ ಕ್ಯಾಂಟಿನ್ ಯೋಜನೆಯನ್ನು ಜಾರಿ ಮಾಡಲಾಗಿದೆ. ಆದರೆ, ಕೆಲವು ಕಾಮಾಲೆ ಕಣ್ಣಿನ ಬಿಜೆಪಿ ನಾಯಕರು ಈ ಯೋಜನೆಗೂ ಅಡ್ಡಗಾಲು ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಇಂದಿರಾ ಕ್ಯಾಟೀನ್ ಸುಮಾರು 100ಕೋಟಿ ರೂ.ಗಳ ಯೋಜನೆಯಾಗಿದೆ. ಅದರಲ್ಲಿ 65ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಎನ್.ಆರ್.ರಮೇಶ್ ಆರೋಪಿಸುತ್ತಿದ್ದಾರೆ. ಒಂದು ಯೋಜನೆಯಲ್ಲಿ ಶೇ.70ಕ್ಕಿಂತ ಹೆಚ್ಚು ಭ್ರಷ್ಟಾಚಾರ ಮಾಡಲು ಸಾಧ್ಯವಿದೆಯಾ. ಸುಳ್ಳು ಹೇಳುವುದಕ್ಕೂ ಒಂದು ಇತಿಮಿತಿ ಬೇಡವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಿಯಾಕೃಷ್ಣ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಬೆಂಗಳೂರನ್ನು ಸರ್ವತೋಮುಖವಾಗಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಟೆಂಡರ್ ಶೂರ್ ಯೋಜನೆ, ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯ ಮೂಲಕ ನಗರದ ರಸ್ತೆಗಳನ್ನು ಅಂತಾರಾಷ್ಟ್ರೀಯ ಮಟ್ಟದ ರಸ್ತೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ವಸತಿ ಸಚಿವ ಎಂ.ಕೃಷ್ಣಪ್ಪ, ಶಾಸಕ ಸುರೇಶ್‌ಕುಮಾರ್, ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ, ಬಿಬಿಎಂಪಿ ಮೇಯರ್ ಪದ್ಮಾವತಿ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತಿತರರಿದ್ದರು.
 
ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕುತ್ತಿದೆ

ರಾಜ್ಯ ಸರಕಾರ ಕೈಗೊಳ್ಳುವ ಜನಪರ ಕಾರ್ಯಕ್ರಮಗಳನ್ನು ಸಹಿಸಲಾಗದ ಬಿಜೆಪಿ ನಾಯಕರು ಇಲ್ಲಸಲ್ಲದ ಆರೋಪದಲ್ಲಿ ತೊಡಗಿದ್ದಾರೆ. ಶಿವಾನಂದ ಸರ್ಕಲ್ ಬಳಿ ಸ್ಟೀಲ್ ಬ್ರಿಡ್ಜ್ ಕಟ್ಟಲು ಪ್ರಸ್ತಾಪ ಮುಂದಿಟ್ಟಾಗ ವಿರೋಧ ವ್ಯಕ್ತಪಡಿಸಿದರು. ಇಂದಿರಾ ಕ್ಯಾಂಟೀನ್ ಯೋಜನೆಗೆ ಕಲ್ಲು ಹಾಕುತ್ತಿದ್ದಾರೆ. ಹಾಗೆಯೇ ರಾಜ್ಯಧ್ವಜವನ್ನು ಅಧಿಕೃತಗೊಳಿಸುವ ನಿಟ್ಟಿನಲ್ಲಿ ಸಮಿತಿ ರಚನೆ ಮಾಡಿದರೆ, ಅದಕ್ಕೂ ಅಡ್ಡಗಾಲು ಹಾಕುತ್ತಿದ್ದಾರೆ. ಒಟ್ಟಾರೆ ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕುವಲ್ಲಿ ನಿರತವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News