ಭೂಮಿ ರಾಷ್ಟ್ರೀಕರಣದಿಂದ ಸಮಾನತೆ: ಸುಖದೇವ್ ಥೋರಟ್
ಬೆಂಗಳೂರು, ಜು. 22: ದಲಿತರು ಮತ್ತು ಶೋಷಿತ ಸಮುದಾಯಗಳಿಗೆ ಸಮಾನತೆ ನಿರಾಕರಿಸಿದರೆ ಉಳಿದೆಲ್ಲಾ ಹಕ್ಕುಗಳನ್ನು ನಿರಾಕರಣೆ ಮಾಡಿದಂತೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಹೋರಾಟದ ಮೂಲ ತತ್ವವೇ ಸಮಾನತಾ ಸಿದ್ಧಾಂತ ಎಂದು ಜೆಎನ್‌ಯು ಪ್ರಾಧ್ಯಾಪಕ ಸುಖದೇವ್ ಥೋರಟ್ ಅಭಿಪ್ರಾಯಿಸಿದ್ದಾರೆ.
ಶನಿವಾರ ಇಲ್ಲಿನ ಜಿಕೆವಿಕೆ ಆವರಣದಲ್ಲಿ ಏರ್ಪಡಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಗೋಷ್ಟಿಯಲ್ಲಿ ಮಾತನಾಡಿದ ಅವರು, ಭೂಸುಧಾರಣೆ ಕಾಯ್ದೆಯಿಂದ ಅಸ್ಪಶ್ಯತೆ ನಿರ್ಮೂಲನೆ ಆಗುವುದಿಲ್ಲ. ಹೀಗಾಗಿ ಭೂಮಿ ರಾಷ್ಟ್ರೀಕರಣಗೊಳಿಸಿ ಎಲ್ಲರಿಗೂ ಸಮಾನವಾಗಿ ಹಂಚಿಕೆ ಮಾಡಬೇಕೆಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಆದರೆ, ಅನಂತರ ಜಾರಿಗೆ ಬಂದ ಭೂಸುಧಾರಣೆ ಕಾಯ್ದೆಗಳಿಂದ ರಾಷ್ಟ್ರದಲ್ಲಿ ಅಸ್ಪಶ್ಯತೆ ಮತ್ತಷ್ಟು ಹೆಚ್ಚಾಗಿದೆ. ಹೊಸ ರೂಪದ ಜಾತಿ ಪದ್ಧತಿ, ಅಸಮಾನತೆಗೆ ಕಾಯ್ದೆ ಸಾಕ್ಷಿಯಾಗಿದೆ. ಆದುದರಿಂದ ಭೂಮಿ ರಾಷ್ಟ್ರೀಕರಣಕ್ಕೆ ಹೋರಾಟ ಅಗತ್ಯ ಎಂದು ಇದೇ ವೇಳೆ ತಿಳಿಸಿದರು.
ಖಾಸಗೀಕರಣ ಸಲ್ಲ: ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಯಾವುದೇ ಕಾರಣಕ್ಕೂ ಖಾಸಗೀಕರಣ ಆಗಬಾರದೆಂಬುದು ಅಂಬೇಡ್ಕರ್ ನಿಲುವಾಗಿತ್ತು. ಆದರೆ, ಇದೀಗ ಈ ಎರಡೂ ಕ್ಷೇತ್ರಗಳು ಖಾಸಗೀಕರಣಗೊಂಡಿರುವುದರಿಂದ ದಲಿತರಿಗೆ ಸಮಾನ ಅವಕಾಶಗಳು ದೊರೆಯುತ್ತಿಲ್ಲ ಎಂದು ಆಕ್ಷೇಪಿಸಿದರು.
ದೇಶದಲ್ಲಿ ಸುಮಾರು 230 ಖಾಸಗಿ ವಿಶ್ವ ವಿದ್ಯಾಲಯಗಳು ಪ್ರಾರಂಭವಾಗಿವೆ. ಖಾಸಗಿ ಕ್ಷೇತ್ರದಲ್ಲಿ ದಲಿತ-ಶೋಷಿತರಿಗೆ ಉದ್ಯೋಗಾವಕಾಶಗಳು ದೊರೆಯುತ್ತಿಲ್ಲ. ಅಲ್ಲದೆ, ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಖಾಸಗೀಕರಣ ಮಾಡಿರುವುದರಿಂದ ದಲಿತರು ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು.
ರಾಷ್ಟ್ರೀಯವಾದಿ: ಅಂಬೇಡ್ಕರ್ ಅವರು ಕೇವಲ ದಲಿತ ವಕ್ತಾರರಂತೆ ನೋಡುವ ದೃಷ್ಟಿ ಬದಲಾಗಬೇಕು. ಅವರೂ ಓರ್ವ ರಾಷ್ಟ್ರೀಯವಾದಿ ಎಂಬುದನ್ನು ಯಾರೂ ಮರೆಯಬಾರದು ಎಂದು ಖ್ಯಾತ ಚಿಂತಕ ಲಾರ್ಡ್ ಭಿಖು ಪರೇಕ್ ಎಂದು ಸಲಹೆ ನೀಡಿದರು. ಮಹಾತ್ಮ ಗಾಂಧಿ ಅವರನ್ನು ರಾಷ್ಟ್ರೀಯವಾದಿ ಎಂದು ಪರಿಗಣಿಸಲಾಗುತ್ತಿದೆ. ಅದೇ ರೀತಿ ಅಂಬೇಡ್ಕರ್ ಅವರನ್ನೂ ರಾಷ್ಟ್ರೀಯವಾದಿ ಎಂದು ಬಿಂಬಿಸಬೇಕು ಎಂದ ಅವರು, ಗಾಂಧೀಜಿ ಅವರನ್ನು ‘ಬುದ್ಧಿವಂತ ಬನಿಯಾ’ ಎಂಬಂತೆ ಅಂಬೇಡ್ಕರ್ ಅವರನ್ನು ದಲಿತ ವಕ್ತಾರರು ಎಂಬುದಕ್ಕೆ ಸೀಮಿತಗೊಳಿಸಬಾರದೆಂದು ಪರೋಕ್ಷವಾಗಿ ಬಿಜೆಪಿಗೆ ತಿರುಗೇಟು ನೀಡಿದರು.
ಅಂಬೇಡ್ಕರ್ ಅವರನ್ನು ಕೇವಲ ಭಾರತದ ಪ್ರಜಾತಂತ್ರ ವ್ಯವಸ್ಥೆಗೆ ಸೀಮಿತಗೊಳಿಸದೆ, ಗಣರಾಜ್ಯವೆಂದೂ ಪರಿಗಣಿಸಬೇಕು. ಆಗ ಮಾತ್ರ ಎಲ್ಲ ವರ್ಗದವರಿಗೂ ನ್ಯಾಯ ದೊರಕಲು ಸಾಧ್ಯ ಎಂದು ಅಂಬೇಡ್ಕರ್ ಅವರ ನಂಬಿದ್ದರು ಎಂದು ಅವರು ಇದೇ ವೇಳೆ ವಿಶ್ಲೇಷಿಸಿದರು.
ದಲಿತರು ಮತ್ತು ಶೋಷಿತರಿಗೆ ರಾಜಕೀಯ ನ್ಯಾಯಕ್ಕಿಂತ ಸಾಮಾಜಿಕ, ಆರ್ಥಿಕ ಸಮಾನತೆ, ಸಮಾನ ಅವಕಾಶಗಳು ಸಿಕ್ಕಾಗ ಮಾತ್ರ ದಲಿತರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂಬುದನ್ನು ಅಂಬೇಡ್ಕರ್ ಸಂವಿಧಾನದ ಮೂಲಕ ಒತ್ತಿ ಹೇಳಿದ್ದಾರೆಂದು ತಿಳಿಸಿದರು.
ಪ್ರಜಾಪ್ರಭುತ್ವ, ಗಣರಾಜ್ಯ ದೇಶದಲ್ಲಿ ದಲಿತ-ಶೋಷಿತರಿಗೆ ಪೂರ್ಣ ಪ್ರಮಾಣದ ಸಮಾನತೆ, ಸಮಾನ ಅವಕಾಶಗಳು ಸಿಗಬೇಕು. ಜಾತಿ, ಅಸ್ಪಶ್ಯತೆಯಂತಹ ಅನಿಷ್ಟಗಳು ತೊಲಗಬೇಕು. ಆಗ ಮಾತ್ರವೇ ಸಾಮಾಜಿಕ ಸುಧಾರಣೆ ಸಾಧ್ಯ ಎಂದು ಅವರು ಪ್ರತಿಪಾದಿಸಿದರು. ಗೋಷ್ಠಿಯಲ್ಲಿ ಚಿಂತಕ ಕೆ. ರಾಜು ಉಪಸ್ಥಿತರಿದ್ದರು.