×
Ad

ರಾಜ್ಯಾದ್ಯಂತ ಲಕ್ಷ ವೃಕ್ಷೋತ್ಸವ-ಬೃಹತ್ ಹಸಿರು ಹಬ್ಬ ಆಚರಣೆ

Update: 2017-07-22 17:58 IST

ಬೆಂಗಳೂರು, ಜು.22: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬೃಹತ್ ವನ ಸಂವರ್ಧನಾ ಅಭಿಯಾನದ ಭಾಗವಾಗಿ ಜು.22ರಂದು ರಾಜ್ಯಾದ್ಯಂತ ಬೃಹತ್ ಹಸಿರು ಹಬ್ಬ ಆಚರಣೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಲಕ್ಷಕ್ಕೂ ಹೆಚ್ಚು ಸ್ವಯಂ ಸೇವಕರಿಂದ ಸಸಿ ನೆಡುವುದರ ಮೂಲಕ ಚಾಲನೆ ನೀಡಿದರು.

ತುಮಕೂರಿನಲ್ಲಿ ಮರಳೂರು ದಿಣ್ಣೆಯ ಈದ್ಗಾ ಮೈದಾನದಲ್ಲಿ ಶಾಸಕ ಡಾ.ರಫೀಕ್ ಅಹಮದ್, ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವೀರೇಂದ್ರ ಹೆಗ್ಗಡೆಯವರ ಕರೆಗೆ ಜಿಲ್ಲೆಯಾದ್ಯಂತ ಹಸಿರು ಹಬ್ಬ ಆಚರಿಸುತ್ತಿದ್ದೇವೆ. ಎಲ್ಲ ಜನಪ್ರತಿನಿಧಿಗಳು, ಇಲಾಖೆಗಳ ಸಹಭಾಗಿತ್ವದಲ್ಲಿ ಶಾಲಾ ಮಕ್ಕಳು ಸೇರಿಕೊಂಡು ಪರಿಸರ ರಕ್ಷಣೆ, ಕಾಳಜಿ, ಪ್ರೀತಿಯನ್ನು ಎಲ್ಲರಲ್ಲಿಯೂ ಮೂಡುವ ಬಗ್ಗೆ ಈ ಕಾರ್ಯಕ್ರಮ ಪ್ರೇರಣೆ ನೀಡಲಿದೆ ಎಂದರು.

ಪಾವಗಡ ತಾಲೂಕಿನ ಹೊಟ್ಟೆ ಬೊಮ್ಮನಹಳ್ಳಿ ಗ್ರಾಮದಲ್ಲಿ ಶಾಸಕ ತಿಮ್ಮರಾಯಪ್ಪ ಗಿಡ ನೆಡುವುದರ ಮೂಲಕ ಚಾಲನೆ ನೀಡಿ, ಪರಿಸರ ರಕ್ಷಣೆಯ ಆಂದೋಲನ ಇಂದು ಅತ್ಯಾವಶ್ಯಕವಾಗಿದ್ದು, ಮಳೆ ಇಲ್ಲದೆ ಕೆರೆ, ಬೋರ್‌ವೆಲ್‌ಗಳು ಬತ್ತಿ ಹೋಗಿದ್ದು, ಜನರು, ಪ್ರಾಣಿ, ಪಕ್ಷಿಗಳ ಮೂಕವೇದನೆ ನೋಡಲಾಗುತ್ತಿಲ್ಲ. ನಾವೆಲ್ಲರೂ ಮನೆಗೊಂದು ಗಿಡ ನೆಡಬೇಕು. ಊರಿನ ಕೆರೆಗಳ ಬದುಗಳಲ್ಲಿ ಗಿಡ ನೆಡಬೇಕು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚಿಕ್ಕಜಾಲದಲ್ಲಿ ಮೀನಾಕ್ಷಿ ಕೃಷ್ಣಭೈರೇಗೌಡ, ತಾಲೂಕು ಪಂಚಾಯತ್ ಆವರಣದಲ್ಲಿ ಶಾಸಕ ಪಿಳ್ಳ ಮುನಿಶಾಮಪ್ಪ ಸಸಿ ನೆಟ್ಟು ಶುಭ ಹಾರೈಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಮಾತನಾಡಿ, ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ಹಸಿರು ಹಬ್ಬವನ್ನು ಗಿಡ ನೆಡುವುದರ ಮೂಲಕ ಮಾಡುತ್ತಿದ್ದು, ಎಲ್ಲಾ ಜನಪ್ರತಿನಿಧಿಗಳು, ಇಲಾಖೆ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸ್ವಸಹಾಯ ಸಂಘದ ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನೆಟ್ಟಂತ ಗಿಡಗಳನ್ನು ಉಳಿಸಿ ಬೆಳೆಸಬೇಕು. ಬೆಂಗಳೂರು ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗಿಡಗಳನ್ನು ನೆಡಲಾಗಿದ್ದು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಉತ್ತರ-ದಕ್ಷಿಣ ಜಿಲ್ಲೆಗಳಲ್ಲಿ 10 ಲಕ್ಷ ಸಸಿಗಳನ್ನು ನಾಟಿ ಮಾಡಿರುತ್ತೇವೆ ಎಂದು ಅವರು ತಿಳಿಸಿದರು.
ಮಾಲೂರು ತಾಲ್ಲೂಕಿನಲ್ಲಿ ಗಿಡ ನೆಡಲು ನೂರಕ್ಕೂ ಹೆಚ್ಚು ಸ್ವಸಹಾಯ ಸಂಘದ ಸದಸ್ಯರು ಶ್ರಮದಾನ ನಡೆಸಿ ಗಿಡ ನೆಡಲು ಸಸಿಗಳನ್ನು ಮತ್ತು ಗುಂಡಿಗಳನ್ನು ತಯಾರಿಸಿ ಗಿಡ ನಾಟಿ ಮಾಡಿದರು. ಮುಳಬಾಗಿಲು ತಾಲ್ಲೂಕಿನ ನಗರಗಳಲ್ಲಿ ಕಾಡು ಬೆಳೆಸಲು ಜಾಗೃತಿ ಮೂಡಿಸಲಾಯಿತು. ಕಾಡು ಬೆಳೆಸಿ ನಾಡು ಉಳಿಸಿ ಎಂದು ಬೀಜದುಂಡೆಗಳನ್ನು ಶಾಲಾ ಮಕ್ಕಳು ತಯಾರಿಸಿ ನಾಟಿ ಮಾಡಿದರು.
ತುರುವೇಕೆರೆಯಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ, ಬಂಗಾರಪೇಟೆ ತಾಲೂಕಿನಲ್ಲಿ ಶಾಸಕ ನಾರಾಯಣಸ್ವಾಮಿ, ನೆಲಮಂಗಲದಲ್ಲಿ ಶಾಸಕ ಡಾ.ಕೆ.ಶ್ರೀನಿವಾಸ್‌ಮೂರ್ತಿ, ಹೊಸಕೋಟೆ ತಾಲೂಕಿನಲ್ಲಿ ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಗಿಡ ನೆಟ್ಟು ಶುಭ ಹಾರೈಸಿದರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News