×
Ad

ನವೋದ್ಯಮ-ಯುವ ಉದ್ಯಮಿಗಳಿಗೆ ಪ್ರೋತ್ಸಾಹ: ಸಯ್ಯದ್ ಅವುನ್ ಸಫಾವಿ

Update: 2017-07-22 18:04 IST

ಬೆಂಗಳೂರು, ಜು.22: ದಲಿತರು ಹಾಗೂ ಅಲ್ಪಸಂಖ್ಯಾತ ಸಮುದಾಯದಲ್ಲಿ ಶಿಕ್ಷಣ, ಉದ್ಯೋಗ ಹಾಗೂ ಉದ್ಯಮಿಗಳ ಬೆಳವಣಿಗೆಗೆ ಪೂರಕವಾಗಿ ಅಗತ್ಯ ಪ್ರೋತ್ಸಾಹವನ್ನು ನೀಡಲಾಗುವುದು ಎಂದು ಇಮಾಮಿಯಾ ಚೇಂಬರ್ ಆಫ್ ಕಾರ್ಮಸ್ ಅಂಡ್ ಇಂಡಸ್ಟ್ರೀಸ್(ಐಸಿಸಿಐ) ಅಧ್ಯಕ್ಷ ಸಯ್ಯದ್ ಅವುನ್ ಸಫಾವಿ ತಿಳಿಸಿದ್ದಾರೆ.

ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಇ-3 ಸಮಾವೇಶ ಹಾಗೂ ಎಕ್ಸ್‌ಪೋ-2017 ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾರತವು 2030ರ ವೇಳೆಗೆ ಆರ್ಥಿಕವಾಗಿ ಮುಂದುವರೆದ ರಾಷ್ಟ್ರಗಳ ಸಾಲಿಗೆ ಸೇರುವ ನಿರೀಕ್ಷೆಯಿದೆ. ಆದರೆ, ಲಕ್ಷಾಂತರ ಮಂದಿ ದಲಿತರು ಹಾಗೂ ಅಲ್ಪಸಂಖ್ಯಾತರು ಸ್ವಾತಂತ್ರ ಭಾರತದಲ್ಲಿ ನಿರೀಕ್ಷಿತ ಯಶಸ್ಸನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎಂದು ಸಯ್ಯದ್ ಅವುನ್ ಸಫಾವಿ ಬೇಸರ ವ್ಯಕ್ತಪಡಿಸಿದರು. ಶೇ.35ರಷ್ಟು ದಲಿತರು ಹಾಗೂ ಅಲ್ಪಸಂಖ್ಯಾತರು ಈಗಲೂ ಬಡತನ ರೇಖೆಗಿಂತ ಕೆಳಗೆ ಜೀವನ ಸಾಗಿಸುತ್ತಿದ್ದಾರೆ. ಪದವೀಧರರು ಅಥವಾ ತಾಂತ್ರಿಕವಾಗಿ ಪರಿಣಿತಿಯನ್ನು ಹೊಂದಿರುವವರ ಪ್ರಮಾಣ ಶೇ.3ರಷ್ಟು ಮಾತ್ರ. ಸಾಮಾಜಿಕ ಹಾಗೂ ಆರ್ಥಿಕವಾಗಿ ಈ ವರ್ಗಗಳನ್ನು ಅಭಿವೃದ್ಧಿಗೊಳಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು. ನಮ್ಮ ಸಂಸ್ಥೆಯು ಸಾಮಾಜಿಕ, ಆರ್ಥಿಕ ಪ್ರಗತಿಯ ಮೂಲಕ ಸಮುದಾಯದ ಅಭಿವೃದ್ಧಿ ಹಾಗೂ ರಾಷ್ಟ್ರ ನಿರ್ಮಾಣದ ಉದ್ದೇಶದಿಂದ ಮುಂದುವರೆಯುತ್ತಿದೆ. ಈಗಾಗಲೆ ನಾವು ಮಹಾರಾಷ್ಟ್ರ, ಉತ್ತರಪ್ರದೇಶ, ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ವಿಭಾಗೀಯ ಕಚೇರಿಗಳನ್ನು ಆರಂಭಿಸಿದ್ದೇವೆ ಎಂದು ಸಯ್ಯದ್ ಅವುನ್ ಸಫಾವಿ ಹೇಳಿದರು.

ಈ ಎರಡು ದಿನಗಳ ಸಮಾವೇಶದಲ್ಲಿ ಸಮುದಾಯದ ಮುಖಂಡರು, ಉದ್ಯಮಿಗಳು, ತಜ್ಞರು ಹಲವಾರು ವಿಷಯಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ. ಇದರಿಂದಾಗಿ, ನವೋದ್ಯಮ, ಯುವ ಉದ್ಯಮಿಗಳಿಗೆ ಪ್ರೋತ್ಸಾಹ ಸಿಗಲಿದೆ. ಅತ್ಯುತ್ತಮ 10 ನವೋದ್ಯಮ ಆಲೋಚನೆಗಳಿಗೆ ಸ್ಥಳದಲ್ಲೆ 10 ಲಕ್ಷರೂ.ಗಳ ನೆರವನ್ನು ನೀಡಲಾಗುವುದು ಎಂದು ಅವರು ಪ್ರಕಟಿಸಿದರು.

ಇಮಾಮಿಯಾ ಛೆಂಬರ್ ಆಫ್ ಕಾರ್ಮಸ್ ಅಂಡ್ ಇಂಡಸ್ಟ್ರೀಸ್(ಐಸಿಸಿಐ) ಕಾರ್ಯಾಧ್ಯಕ್ಷ ಮೀರ್ ಮುಮ್ತಾಝ್ ಅಲಿ ಮಾತನಾಡಿ, ಈ ಸಮಾವೇಶದಲ್ಲಿ ದೇಶ, ವಿದೇಶಗಳಿಂದ 50 ಗಣ್ಯರು, ತಜ್ಞರು ಪಾಲ್ಗೊಂಡಿದ್ದಾರೆ. ಶಿಕ್ಷಣ, ಉದ್ಯೋಗ ಹಾಗೂ ಉದ್ಯಮ ಆರಂಭಿಸುವವರಿಗೆ ಸೂಕ್ತವಾದ ಮಾರ್ಗದರ್ಶನ ನೀಡುವುದು ನಮ್ಮ ಉದ್ದೇಶವಾಗಿದೆ ಎಂದರು.

ಈ ಮೂರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವವರು ತಾವು ಅಭಿವೃದ್ಧಿ ಯಾಗುವುದರ ಜೊತೆಗೆ, ದೇಶದ ಅಭಿವೃದ್ಧಿಗೂ ಕೈ ಜೋಡಿಸಬೇಕು. ಅಲ್ಪಸಂಖ್ಯಾತರು ಹಾಗೂ ಇತರ ಎಲ್ಲ ವರ್ಗದವರಿಗೂ ಈ ಸಮಾವೇಶದಿಂದ ಉಪಯೋಗವಾಗಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಇಮಾಮಿಯಾ ಛೆಂಬರ್ ಆಫ್ ಕಾರ್ಮಸ್ ಅಂಡ್ ಇಂಡಸ್ಟ್ರೀಸ್(ಐಸಿಸಿಐ)ನ ಕಾರ್ಯಾಧ್ಯಕ್ಷ ಎಂ.ಕ್ಯೂ.ಸಯ್ಯದ್, ಶಿಕ್ಷಣ ತಜ್ಞ ಆಗಾ ಸುಲ್ತಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News