×
Ad

ಮಹಿಳೆ, ಮಕ್ಕಳ ಭದ್ರತೆಗೆ ಠಾಣೆಗೊಂದು ಪಿಂಕ್ ಹೊಯ್ಸಳ: ಸಿದ್ದರಾಮಯ್ಯ

Update: 2017-07-22 18:11 IST

ಬೆಂಗಳೂರು, ಜು.22: ಬೆಂಗಳೂರು ನಗರದ ಮಹಿಳೆಯರ ಹಾಗೂ ಮಕ್ಕಳ ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪ್ರತಿ ಪೊಲೀಸ್ ಠಾಣೆಗೆ ಒಂದು ಪಿಂಕ್ ಹೊಯ್ಸಳವನ್ನು ಕೊಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.ಶನಿವಾರ ಬಿಬಿಎಂಪಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಮಾಗಡಿ ಮುಖ್ಯರಸ್ತೆಯ ಕರ್ನಾಟಕ ಹೌಸಿಂಗ್ ಬೋರ್ಡ್ ಬಳಿ ಸುಮಾರು 24ಕೋಟಿ ರೂ.ವೆಚ್ಚದಲ್ಲಿ ನಿಮಾರ್ಣಗೊಂಡಿರುವ ‘ಕೆಳ ಸೇತುವೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿನಲ್ಲಿ ಡೈನಮಿಕ್ ನಗರವೆಂದು ಬೆಂಗಳೂರ ಹೆಸರು ಪಡೆದಿದೆ. ಆದರೂ ಹಲವಾರು ಸಮಸ್ಯೆಗಳಿಂದ ಬಳಲುತ್ತಿದೆ. ಇವೆಲ್ಲಾ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸರಕಾರ ಹಾಗೂ ಜನತೆ ಒಗ್ಗೂಡಿ ಕೆಲಸ ಮಾಡಬೇಕಾಗಿದೆ. ಮುಖ್ಯವಾಗಿ ಮಹಿಳೆ ಮತ್ತು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ ಎಂದು ಅವರು ಹೇಳಿದರು.

2006-07ರಲ್ಲಿ 280 ಚ.ಕಿಮೀ ವಿಸ್ತೀರ್ಣವಿದ್ದ ಬೆಂಗಳೂರು ಈಗ 800 ಚಕಿಮೀನಷ್ಟು ವಿಸ್ತಾರಗೊಂಡಿದೆ. ಪ್ರತಿದಿನ ಸುಮಾರು 67ಲಕ್ಷ ವಾಹನಗಳು ಸಂಚರಿಸುತ್ತಿವೆ. ಈ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕ ಬಸ್‌ಗಳನ್ನು ಹೆಚ್ಚಿಸಲಾಗಿದೆ ಹಾಗೂ ಮೆಟ್ರೋ ರೈಲು ಸೇವೆಯನ್ನು ಒದಗಿಸಲಾಗಿದೆ. ಇದನ್ನು ಜನತೆ ಹೆಚ್ಚಿನದಾಗಿ ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.

ಮಾಗಡಿ ಮುಖ್ಯರಸ್ತೆಯಲ್ಲಿ ನೂತನವಾಗಿ ಉದ್ಘಾಟನೆಗೊಂಡಿರುವ ಕೆಳ ಸೇತುವೆಗೆ ನಾಡಪ್ರಭು ಕೆಂಪೇಗೌಡ ಕೆಳ ಸೇತುವೆಯೆಂದು ಹೆಸರಿಡುವುದಕ್ಕೆ ಸರಕಾರದ ಅಭ್ಯಂತರವಿಲ್ಲ. ಈ ಕುರಿತು ಬಿಬಿಎಂಪಿ ಸಭೆಯಲ್ಲಿ ಮೇಯರ್ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News