×
Ad

ಉಚಿತ ಸ್ಯಾನಿಟರಿ ನ್ಯಾಪ್‌ಕಿನ್ ವಿತರಣೆ ಯೋಜನೆಗೆ ಚಾಲನೆ

Update: 2017-07-24 18:42 IST

ಬೆಂಗಳೂರು, ಜು. 24: ಮಹಿಳೆಯರ ಅಗತ್ಯವಾದ ಬಳಕೆಯ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಜಿಎಸ್ಟಿ ತೆರಿಗೆ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ವಿಧಾನ ಪರಿಷತ್ತಿನ ಸದಸ್ಯೆ ತಾರಾ ಅನೂರಾಧ ಒತ್ತಾಯಿಸಿದ್ದಾರೆ.

ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಅಯೋಧ್ ಸೇವಾ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಉಚಿತ ಸ್ಯಾನಿಟರಿ ನ್ಯಾಪ್‌ಕಿನ್ ವಿತರಣೆ ಯೋಜನೆಗೆ ಚಾಲನೆ ಕೊಟ್ಟು ಮಾತನಾಡಿದ ಅವರು, ಕೇಂದ್ರ ಸರಕಾರ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಮೇಲೆ ವಿಧಿಸಿರುವ ಜಿಎಸ್‌ಟಿ ತೆರಿಗೆ ವ್ಯಾಪ್ತಿಯಿಂದ ಹೊರಗಿಡುವ ಕುರಿತು ಜಿಎಸ್‌ಟಿ ಕೌನ್ಸಿಲ್‌ಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಜಿಎಸ್ಟಿ ಜಾರಿಗೊಳಿಸುವ ಮುನ್ನಾ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಮೇಲೆ ವಿವಿಧ ಹಂತಗಳಲ್ಲಿ ಶೇ.18ರಷ್ಟು ತೆರಿಗೆ ವಿಧಿಸಲಾಗಿತ್ತು. ಇದು ಯಾರ ಗಮನಕ್ಕೂ ಬಂದಿರಲಿಲ್ಲ. ಈಗ ಏಕರೂಪ ತೆರಿಗೆ ಜಿಎಸ್ಟಿ ಬಂದ ಮೇಲೆ ಶೇ.12ರಷ್ಟು ತೆರಿಗೆ ವಿಧಿಸಿರುವುದು ಬಹಿರಂಗಗೊಂಡಿದೆ ಎಂದರು.
ಮಹಿಳೆಯರ ಅಗತ್ಯವಾದ ಬಳಕೆಯ ಈ ವಸ್ತುವಿನ ಮೇಲೆ ತೆರಿಗೆ ವಿನಾಯಿತಿ ನೀಡಬೇಕಿತ್ತು. ಜಿಎಸ್ಟಿ ತೆರಿಗೆಯಿಂದ ಕೈ ಬಿಡುವ ಕುರಿತು ಕೌನ್ಸಿಲ್‌ಗೆ ಪತ್ರ ಬರೆಯಲಾಗಿದೆ. ಈ ತಿಂಗಳಲ್ಲಿ ನಡೆಯುವ ಜಿಎಸ್‌ಟಿ ಕೌನ್ಸಿಲ್‌ನ ಸಭೆಯಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಮೇಲೆ ತೆರಿಗೆ ವಿನಾಯಿತಿ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದರು.

ದೇಶದಲ್ಲಿ ಕೇವಲ ಶೇ.12 ಮಂದಿ ಮಹಿಳೆಯರು ಮಾತ್ರ ಋತುಮತಿ ಸಮಯದಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಕೊಂಡು ಬಳಸುತ್ತಿದ್ದಾರೆ. ಉಳಿದವರು ಇನ್ನು ಸಾಂಪ್ರದಾಯಿಕ, ಹಳೆಯ ಅವೈಜ್ಞಾನಿಕ ಪದ್ಧತಿಗಳನ್ನೇ ಅನುಸರಿಸುತ್ತಿದ್ದಾರೆ. ಆರೋಗ್ಯ ದೃಷ್ಟಿಯಿಂದ ಋತುಸ್ರಾವದ ಆ ಮೂರು ದಿನ ಸುರಕ್ಷತೆಯಿಂದ ನೋಡಿಕೊಳ್ಳುವುದು ಉತ್ತಮ. ಆಯೋಧ್ ಸೇವಾ ಪ್ರತಿಷ್ಠಾನ ಬಿಪಿಎಲ್ ಕಾರ್ಡ್‌ದಾರ ಬಡ ಮಹಿಳೆಯರಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ವಿತರಿಸುತ್ತಿರುವ ಕಾರ್ಯ ಸ್ವಾಗತಾರ್ಹ ಎಂದರು.

ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಪ್ರವೀಣ್ ನಾಯಕ್ ಮಾತನಾಡಿ, ನಗರದ ಶಾಂತಿನಗರ ಮತ್ತು ಗಂಗಾವತಿ ತಾಲೂಕಿನ ಬಸವನದುರ್ಗಾ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ 120 ಮಂದಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ವಿತರಿಸಲಾಗುತ್ತಿದೆೆ. ಈ ಯೋಜನೆಯಡಿ 2020ರ ವೇಳೆಗೆ ಐದು ದಶ ಲಕ್ಷ ಮಂದಿ ಮಹಿಳೆಯರಿಗೆ ಉಚಿತವಾಗಿ ವಿತರಿಸುವ ಗುರಿಯಿದೆ ಎಂದು ತಿಳಿಸಿದರು.

ಮುಟ್ಟಿನ ಸಮಯದಲ್ಲಿ ಶಾಲೆಗಳಲ್ಲಿ ಯುವತಿಯರ ಹಾಜರಾತಿ ಹೆಚ್ಚಿಸುವ ಮತ್ತು ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವುದು ಯೋಜನೆಯ ಮುಖ್ಯ ಗುರಿ. ಈ ಯೋಜನೆಗೆ ತಗುಲುವ ವೆಚ್ಚವನ್ನು ಸರಿದೂಗಿಸಲು ಕಂಪೆನಿಗಳ ಸಿಎಸ್‌ಆರ್ ನಿಧಿ ಮತ್ತು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲು ನಿರ್ಧರಿಸಲಾಗಿದೆ ಎಂದರು.

ಕಾರ್ಯಾಚರಣೆಯ ಮುಖ್ಯಸ್ಥೆ ಪೂನಂ ಮಾತನಾಡಿ, ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಮತ್ತು ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸುವ ಜೊತೆಗೆ ಮರುಬಳಕೆ ಸ್ಯಾನಿಟರಿ ನ್ಯಾಪ್‌ಕಿನ್ ಬಳಕೆ ಕುರಿತು ಅರಿವು ಮೂಡಿಸಲಾಗುವುದು.ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಉಚಿತವಾಗಿ ನ್ಯಾಪ್‌ಕಿನ್‌ಗಳನ್ನು ವಿತರಿಸಲು ಆನ್‌ಲೈನ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ 20 ಮಹಿಳೆಯರಿಗೆ ಸಾಂಕೇತಿಕವಾಗಿ ಉಚಿತವಾಗಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ವಿಧಾನ ಪರಿಷತ್ತಿನ ಸದಸ್ಯೆ ತಾರಾ ಅನೂರಾಧ ವಿತರಿಸಿದರು. ಈ ವೇಳೆ ಟ್ರಸ್ಟಿ ರಾಮಕೃಷ್ಣ ನಾಯಕ್, ರಂಗಕರ್ಮಿ ಕೃಷ್ಣಮೂರ್ತಿ ಕವತ್ತಾರು ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News