×
Ad

ಉಕ್ಕಿನ ಸೇತುವೆ ವಿರೋಧಿಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ

Update: 2017-07-24 18:45 IST

ಬೆಂಗಳೂರು, ಜು. 24: ಉಕ್ಕಿನ ಸೇತುವೆ ಯೋಜನೆ ನಗರಾಭಿವೃದ್ಧಿ ಯೋಜನೆಯೇ ಹೊರತು ಮರಗಳನ್ನು ಕಡಿಯುವ ಕಾರ್ಯಕ್ರಮ ಅಲ್ಲ ಎಂದು ನಗರದ ಶಿವಾನಂದ ವೃತ್ತದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಉಕ್ಕಿನ ಸೇತುವೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿರುವವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋರಮಂಗಲ ನೂರು ಅಡಿ ಮುಖ್ಯರಸ್ತೆಯಲ್ಲಿರುವ ಈಜಿಪುರ ಮುಖ್ಯರಸ್ತೆ, ಒಳವರ್ತುಲ ರಸ್ತೆ ಜಂಕ್ಷನ್‌ನಿಂದ ಸೋನಿ ವರ್ಲ್ಡ್ ಜಂಕ್ಷನ್ ಮಾರ್ಗವಾಗಿ ಕೇಂದ್ರೀಯ ಸದನ ಜಂಕ್ಷನ್‌ವರೆಗೆ 204 ಕೋಟಿ ರೂ. ವೆಚ್ಚದ ಮೇಲು ಸೇತುವೆ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಮರಗಳನ್ನು ಕಡಿಯಲಾಗುತ್ತದೆ ಎಂದು ಮೇಲುಸೇತುವೆ, ಕೆಳಸೇತುವೆ ಯೋಜನೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ ಉಕ್ಕಿನ ಸೇತುವೆ ನಿರ್ಮಾಣ ಯೋಜನೆಗೆ ಪೂರ್ವಗ್ರಹ ಪೀಡಿತ ವಿರೋಧಿಗಳು ಪ್ರತಿಭಟನೆ ನಡೆಸಿ ನಿಲ್ಲಿಸಿದರು. ಕೆಲವರಿಗೆ ಹಾಗೂ ಪ್ರತಿಪಕ್ಷದವರಿಗೆ ಪ್ರತಿಭಟನೆ ನಡೆಸುವುದೊಂದೇ ಗೊತ್ತು, ಅಭಿವೃದ್ಧಿಗೆ ಸಹಕಾರ ನೀಡುವುದಲ್ಲ ಎಂದು ಕಿಡಿಕಾರಿದರು.
ಮರವನ್ನು ಕಡಿಯದೆ ಹಾಗೆಯೇ ಉಳಿಸಿಕೊಂಡು ಮತ್ತೊಂದು ಕಡೆ ಅದೇ ಮರವನ್ನು ನೆಡುವ ತಂತ್ರಜ್ಞಾನವೂ ಇದೆ. ಹಾಗಾಗಿ ನಗರದ ಅಭಿವೃದ್ಧಿಗೆ ನಾಗರಿಕರು ಸಹಕಾರ ನೀಡಬೇಕು. ನಗರದ ಅಭಿವೃದ್ಧಿ ದೃಷ್ಟಿಯಿಂದ ಮರಗಳನ್ನು ಕಡಿಯಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಕಡಿಯುವ ಒಂದು ಮರಕ್ಕೆ ಬದಲಾಗಿ ಹತ್ತು ಗಿಡಗಳನ್ನು ನೆಡುವ ಮೂಲಕ ಪರಿಸರವನ್ನು ಉಳಿಸಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಎಲ್ಲವನ್ನು ರಾಜಕೀಯ ಕನ್ನಡಿಯಿಂದ ನೋಡುವುದು ತಪ್ಪು. ಇಂದಿರಾ ಕ್ಯಾಂಟೀನ್ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಇಂತಹವರಿಗೆ ಮುಂದಿನ ಚುನಾವಣೆಯಲ್ಲಿ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.

ಹಿಂದೆ ಇದ್ದ ಸರಕಾರ ಪಾಲಿಕೆಯ ಮೇಲೆ 8 ಸಾವಿರ ಕೋಟಿ ರೂ. ಸಾಲದ ಹೊರೆ ಹೊರಿಸಿ ಹೋಗಿದ್ದರು. ಅಲ್ಲದೆ ಪಾಲಿಕೆಯ ಆಸ್ತಿಯನ್ನು ಅಡಮಾನ ಇಟ್ಟಿದ್ದರು. ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಪಾಲಿಕೆಯಲ್ಲಿ ಆರ್ಥಿಕ ಶಿಸ್ತು ತರಲಾಗಿದೆ ಎಂದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಮೇಲು ಸೇತುವೆ ಕಾಮಗಾರಿ 18 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಯೋಜನೆಗಾಗಿ 204 ಕೋಟಿ ರೂ. ಮೀಸಲಿಡಲಾಗಿದೆ. ಮೇಲು ಸೇತುವೆ ನಿರ್ಮಾಣದಿಂದ 100 ಅಡಿ ರಸ್ತೆಯಲ್ಲಿ ಎಲ್ಲ ಜಂಕ್ಷನ್‌ಗಳು ಸಿಗ್ನಲ್ ಮುಕ್ತವಾಗುವುದರಿಂದ 30 ನಿಮಿಷಗಳ ಸಮಯ ಉಳಿತಾಯವಾಗಲಿದೆ ಎಂದು ತಿಳಿಸಿದರು.

ಈ ವೇಳೆ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಮೇಯರ್ ಪದ್ಮಾವತಿ, ಶಾಸಕರಾದ ಹ್ಯಾರಿಸ್, ಎಚ್.ಎಂ. ರೇವಣ್ಣ, ಉಪಮೇಯರ್ ಆನಂದ್ ಸೇರಿದಂತೆ ಇತರರು ಇದ್ದರು.

ಅನ್ನ, ನೀರು, ಮನೆ, ಶಿಕ್ಷಣ ಕೊಟ್ಟವರನ್ನು ಜನ ಎಂದಿಗೂ ಮರೆಯುವುದಿಲ್ಲ. ಹಾಗೇ ಭ್ರಷ್ಟಾಚಾರ ನಡೆಸಿ ಜೈಲಿಗೆ ಹೋಗಿ ಬಂದವರನ್ನು ಕೂಡ ಜನ ಮರೆಯಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News