ಕೆರೆಗಳ ರಕ್ಷಣೆಗೆ ಸರಕಾರ ಬದ್ಧ: ಕೆ.ಜೆ.ಜಾರ್ಜ್
ಬೆಂಗಳೂರು, ಜು.24: ಜೀವಂತವಿರುವ ಎಲ್ಲ ಕೆರೆಗಳ ರಕ್ಷಣೆಗೆ ಸರಕಾರ, ಬಿಬಿಎಂಪಿ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳು ಬದ್ಧವಾಗಿವೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬೆಂಗಳೂರು ನಗರದ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಚರ್ಚಿಸಲು ಕರೆದಿದ್ದ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯ ಸರಕಾರ ಯಾವ ಜೀವಂತ ಕೆರೆಗಳನ್ನು ಡಿನೋಟಿಫಿಕೇಷನ್ ಮಾಡುತ್ತಿಲ್ಲ. ಜೀವಂತವಿರುವ ಕೆರೆಗಳನ್ನು ರಕ್ಷಿಸಲು ಆದ್ಯತೆ ನೀಡುತ್ತಿದೆ. ನಿರ್ಜೀವವಾಗಿರುವ ಕೆರೆಗಳನ್ನಷ್ಟೇ ಡಿನೋಟಿಫಿಕೇಷನ್ ಮಾಡಿ, ಬಿಡಿಎಗೆ ಬಡಾವಣೆಗಳನ್ನು ನಿರ್ಮಿಸಲು ಹಸ್ತಾಂತರಿಸುವ ಪ್ರಸ್ತಾವನೆ ಬಂದಿದೆ ಎಂದು ಅವರು ಹೇಳಿದರು.
ಕೆರೆಗಳನ್ನು ಡಿನೋಟಿಫಿಕೇಷನ್ ಮಾಡುವ ವಿಚಾರವು ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಬೇಕು. ಆನಂತರ ಅದನ್ನು ವಿಧಾನಸಭೆಯ ಮುಂದಿಟ್ಟು ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ. ಈ ಪ್ರಕ್ರಿಯೆಗಳು ಇನ್ನು ಆರಂಭವೇ ಆಗಿಲ್ಲ. ಆಗಲೆ, ಸರಕಾರ ಕೆರೆಗಳನ್ನು ಡಿನೋಟಿಫಿಕೇಷನ್ ಮಾಡುತ್ತಿದೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಜಾರ್ಜ್ ತಿಳಿಸಿದರು.
ಶಿವಾನಂದ ಸರ್ಕಲ್‌ನಲ್ಲಿ ಉಕ್ಕಿನ ಸೇತುವೆ ನಿರ್ಮಿಸಬೇಕೆಂಬುದು ಹೊಸ ಯೋಜನೆಯಲ್ಲ. 2012ರಿಂದ ಈ ಯೋಜನೆ ನನೆಗುದಿಗೆ ಬಿದ್ದಿದೆ. ನಾವು 2014ರ ನಂತರ ಈ ಯೋಜನೆ ಆರಂಭಿಸಲು ಟೆಂಡರ್ ಕರೆಯುವುದು ಸೇರಿದಂತೆ ಇನ್ನಿತರ ಪ್ರಕ್ರಿಯೆಗಳನ್ನು ಆರಂಭಿಸಿದ್ದೇವೆ ಎಂದು ಜಾರ್ಜ್ ಹೇಳಿದರು.
ಈ ಉಕ್ಕಿನ ಸೇತುವೆ ನಿರ್ಮಾಣಕ್ಕಾಗಿ 40 ಮರಗಳನ್ನು ಕಡಿಯಲಾಗುತ್ತಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಆದರೆ, ಯಾವ ಮರಗಳನ್ನು ನಾವು ಕಡಿಯುವುದಿಲ್ಲ. ಪರಿಸರವನ್ನು ಹಾಳು ಮಾಡುವ ಉದ್ದೇಶ ನಮಗಿಲ್ಲ. ಶಿವಾನಂದ ಸರ್ಕಲ್ ಬಳಿ ಇರುವ ರೈಲ್ವೆ ಕೆಳ ಸೇತುವೆಯನ್ನು ಅಗಲೀಕರಣ ಮಾಡಲು ಈಗಾಗಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಬೆಂಗಳೂರು ನಗರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶೀಲನೆ ಮಾಡಿದ್ದಾರೆ. ಸುಮಾರು 7300 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೆ ಸುಮಾರು 2-3 ಸಾವಿರ ಕೋಟಿ ರೂ.ಕಾಮಗಾರಿಗಳಿಗೆ ಕಾರ್ಯಾದೇಶವನ್ನು ಹೊರಡಿಸಲಾಗಿದೆ ಎಂದು ಜಾರ್ಜ್ ಹೇಳಿದರು.
ಈಗ ಕೈಗೊಂಡಿರುವ ಬಹುತೇಕ ಕಾಮಗಾರಿಗಳನ್ನು ಸರಕಾರದ ಬಾಕಿ ಇರುವ ಅವಧಿಯಲ್ಲೆ ಮುಗಿಸುತ್ತೇವೆ. ಮುಂದಿನ ಬಾರಿಯೂ ನಮ್ಮದೇ ಸರಕಾರ ಅಧಿಕಾರಕ್ಕೆ ಬರಲಿದ್ದು, ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ. ಅಭಿವೃದ್ಧಿಯ ಪಥ ಸ್ಥಗಿತವಾಗುವುದಿಲ್ಲ. ಅದು ನಿರಂತರವಾದ ಪ್ರಕ್ರಿಯೆಯಾಗಿ ಮುಂದುವರೆಯುತ್ತಿರುತ್ತದೆ ಎಂದು ಅವರು ತಿಳಿಸಿದರು.