ರೇರಾ ಕಾಯಿದೆಗೆ ಸಚಿವ ಸಂಪುಟದ ಅನುಮೋದನೆ
ಬೆಂಗಳೂರು, ಜು.24: ಕರ್ನಾಟಕ ರಿಯಲ್ ಎಸ್ಟೇಟ್(ನಿಯಂತ್ರಣ ಮತ್ತು ಅಭಿವೃದ್ಧಿ)ಕಾಯಿದೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಜು.10ರಂದು ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ಈ ಕಾಯಿದೆ ಪ್ರಕಾರ ಸಾರ್ವಜನಿಕರು ಇಚ್ಛೆ ಪಟ್ಟ ಪ್ರದೇಶಗಳಲ್ಲಿ ನಿವೇಶನ, ಅಪಾರ್ಟ್‌ಮೆಂಟ್, ಮನೆಗಳನ್ನು ಹೆಚ್ಚಿನ ರೀತಿಯ ಶ್ರಮವಿಲ್ಲದೆ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಅಲ್ಲದೆ ರಿಯಲ್ ಎಸ್ಟೇಟ್ ಉದ್ದಿಮೆದಾರರು ಹಾಗೂ ಏಜೆಂಟರ ವಿರುದ್ಧ ದೂರುಗಳನ್ನು ದಾಖಲಿಸಲು ಅಥವಾ ಪರಿಹಾರವನ್ನು ಪಡೆಯಲು ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮವು ಸಾರ್ವಜನಿಕರಿಗೆ ಒಂದು ಕಾನೂನುಬದ್ಧ ವೇದಿಕೆಯನ್ನು ಒದಗಿಸಿಕೊಟ್ಟಿದೆ.
ಹಣ ಕಟ್ಟಿಸಿಕೊಂಡು ನಿವೇಶನ, ಅಪಾರ್ಟ್‌ಮೆಂಟ್, ಮನೆಗಳನ್ನು ನೋಂದಾಯಿಸಿಕೊಳ್ಳಲು ವಿಳಂಬ ಮಾಡುವ, ಮೋಸ ಮಾಡುವ ರಿಯಲ್ ಎಸ್ಟೇಟ್ ಉದ್ದಿಮೆದಾರರು ಹಾಗೂ ಏಜೆಂಟರ ವಿರುದ್ಧ ಸಾರ್ವಜನಿಕರು ದೂರುಗಳನ್ನು ದಾಖಲಿಸಿ ಪರಿಹಾರ ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ಗ್ರಾಹಕರ ಹಕ್ಕು ಮತ್ತು ಹಿತಾಸಕ್ತಿಯನ್ನು ಕಾಪಾಡಲು ಸರಕಾರ ಕ್ರಮ ಕೈಗೊಂಡಿದೆ. ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ ಮತ್ತು ಕರ್ನಾಟಕ ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ನಿಯಮಗಳು ರಾಜ್ಯದಲ್ಲಿ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವನ್ನು (ರೇರಾ) ಸ್ಥಾಪಿಸಲು ಅವಕಾಶ ಕಲ್ಪಿಸಿರುತ್ತದೆ. ಪ್ರಾಧಿಕಾರದ ತೀರ್ಮಾನ, ಆದೇಶ ಮತ್ತು ನಿರ್ದೇಶನಗಳನ್ನು ಪ್ರಶ್ನಿಸುವ ಸಲುವಾಗಿ ರಿಯಲ್ ಎಸ್ಟೇಟ್ ಮೇಲ್ಮನ ಪ್ರಾಧಿಕಾರವನ್ನು ಸ್ಥಾಪಿಸಲು ಅವಕಾಶ ಇರುತ್ತದೆ. ರಿಯಲ್ ಎಸ್ಟೇಟ್ ಉದ್ದಿಮೆದಾರರು ಹಾಗೂ ಏಜೆಂಟರು ರೇರಾ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಸಿಕೊಳ್ಳುವುದನ್ನು ಹಾಗೂ ತಾವು ಮಾರಾಟ ಮಾಡಲು ಬಯಸುವ ನಿವೇಶನ, ಅಪಾರ್ಟ್‌ಮೆಂಟ್, ಮನೆಗಳನ್ನು ಕಡ್ಡಾಯವಾಗಿ ರೇರಾ ಅಂತರ್ಜಾಲ ಪೋರ್ಟಲ್‌ನಲ್ಲಿ ಪ್ರಕಟಿಸುವುದು ಕಡ್ಡಾಯಗೊಳಿಸಿದೆ.
ಈ ಕ್ರಮವು ಖರೀದಿಸಲು ಬಯಸುವ ಗ್ರಾಹಕರಿಗೆ ಹೆಚ್ಚಿನ ರೀತಿಯ ಪಾರದರ್ಶಕತೆ, ಆಯ್ಕೆ ಮತ್ತು ಅವಕಾಶಗಳನ್ನು ಕಲ್ಪಿಸಿವುದರ ಜೊತೆಗೆ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಲು ಅವಕಾಶ ಕಲ್ಪಿಸಿದೆ.