ಬಿಗ್‌ಬಾಸ್ ಖ್ಯಾತಿಯ ಪ್ರಥಮ್‌ಗೆ ಜಾಮೀನು
ಬೆಂಗಳೂರು, ಜು.24: ನಟ ಭುವನ್ ಅವರ ತೊಡೆ ಕಚ್ಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‌ಬಾಸ್ ಖ್ಯಾತಿಯ ಪ್ರಥಮ್‌ಗೆ ನಗರದ ಎಸಿಜೆಎಂ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಈ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಪ್ರಥಮ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ನೀಡಿತು.
ವಿಚಾರಣೆಯಲ್ಲಿ ಪ್ರಥಮ್ ತನ್ನ ವೈಯಕ್ತಿಕ ಮಾಹಿತಿ ನೀಡಲು ಮುಂದಾಗಿದ್ದರು. ನಾನು ಬಿಗ್‌ಬಾಸ್‌ನ 4ನೆ ಸೀಸನ್‌ನ ವಿನ್ನರ್. ನನಗೆ ಬಂದ 50 ಲಕ್ಷ ರೂಪಾಯಿಯನ್ನು ಯೋಧರಿಗೆ ನೀಡಿದ್ದೇನೆ. ಈ ಕೇಸ್‌ನಲ್ಲಿ ಶೇ.80ರಷ್ಟು ಸುಳ್ಳು ಮಾಹಿತಿ ನೀಡಲಾಗಿದೆ. ನಾನು ಆಸ್ಪತ್ರೆಯಲ್ಲಿ ಇದ್ದಾಗ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಪ್ರಥಮ್ ವಿಚಾರಣೆಯಲ್ಲಿ ತಿಳಿಸಿದ್ದಾನೆ. ಈ ವೇಳೆ ತಮ್ಮ ಪರ ವಕೀಲರು ಸುಮ್ಮನಿರುವಂತೆ ಸೂಚಿಸಿದರೂ ಪ್ರಥಮ್ ನ್ಯಾಯಾಧೀಶರ ಮುಂದೆ ಮಾತು ಮುಂದುವರೆಸಿದ್ದ. ಆಗ ಸಾರ್ವಜನಿಕ ಸ್ಥಳದಲ್ಲಿ ಹಾಗೂ ಜನರ ಜೊತೆ ಸಭ್ಯವಾಗಿ ನಡೆದುಕೊಳ್ಳುವಂತೆ ನ್ಯಾಯಾಧೀಶರು ಸೂಚಿಸಿದರು.
ಭುವನ್ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ತಲಘಟ್ಟಪುರ ಪೊಲೀಸರು ಪ್ರಥಮ್ ಬಂಧನಕ್ಕೆ ಮುಂದಾಗಿದ್ದರು. ಆದರೆ, ಕೋರ್ಟ್ ಮೂಲಕ ನಿರೀಕ್ಷಣಾ ಜಾಮೀನು ಪಡೆದಿರುವ ಪ್ರಥಮ್ ಮುಂದೆ ಪೊಲೀಸರೆದುರು ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.
ವಿಚಾರಣೆಗೆ ಭುವನ್ ಹಾಜರ್: ತಲಘಟ್ಟಪುರ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿ ಪ್ರಥಮ್ ಕಾಲು ಕಚ್ಚಿರುವುದು ಮತ್ತು ಧಾರಾವಾಹಿ ಚಿತ್ರೀಕರಣ ವೇಳೆ ನಡೆದ ಗಲಾಟೆ ಬಗ್ಗೆಯೂ ಭುವನ್ ವಿವರಣೆ ನೀಡುತ್ತಿದ್ದಾರೆ. ಐಪಿಸಿ ಸೆಕ್ಷನ್ 321- ಹಲ್ಲೆ, ಐಪಿಸಿ 341-ಉದ್ದೇಶಪೂರ್ವಕ ಅಡ್ಡಿ, 504-ನಿಂದನೆ, ಪ್ರಚೋದನೆ, 509- ಅವಾಚ್ಯ ಶಬ್ದಗಳಿಂದ ನಿಂದನೆ ಅಡಿಯಲ್ಲಿ ಪ್ರಥಮ್ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.