ಪ್ರಣಯ್‌ ಚಾಂಪಿಯನ್: ಕಶ್ಯಪ್ ರನ್ನರ್ಸ್-ಅಪ್

Update: 2017-07-24 18:40 GMT

ಕ್ಯಾಲಿಫೋರ್ನಿಯ, ಜು.24: ಯುಎಸ್ ಓಪನ್ ಗ್ರಾನ್‌ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಫೈನಲ್‌ನಲ್ಲಿ ತಮ್ಮದೇ ದೇಶದ ಪಾರುಪಳ್ಳಿ ಕಶ್ಯಪ್‌ರನ್ನು ನೇರ ಗೇಮ್‌ಗಳ ಅಂತರದಿಂದ ಮಣಿಸಿದ ಭಾರತದ ಶಟ್ಲರ್ ಎಚ್.ಎಸ್.ಪ್ರಣಯ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಸೋಮವಾರ ಭಾರತದ ಇಬ್ಬರು ಆಟಗಾರರ ನಡುವಿನ ಹೋರಾಟಕ್ಕೆ ಸಾಕ್ಷಿಯಾದ ಯುಎಸ್ ಓಪನ್ ಫೈನಲ್ ಪಂದ್ಯದಲ್ಲಿ ಪ್ರಣಯ್ ಅವರು ಹಿರಿಯ ಆಟಗಾರ ಕಶ್ಯಪ್‌ರನ್ನು 21-15, 20-22, 21-12 ಗೇಮ್‌ಗಳಿಂದ ಮಣಿಸಿ ಮೂರನೆ ಬಾರಿ ಗ್ರಾನ್‌ಪ್ರಿ ಪ್ರಶಸ್ತಿಯನ್ನು ಗೆದ್ದುಕೊಂಡರು. ಕಶ್ಯಪ್ 21 ತಿಂಗಳ ಬಳಿಕ ಫೈನಲ್ ಪಂದ್ಯವೊಂದರಲ್ಲಿ ಆಡಿದರು.
ದೀರ್ಘ ಸಮಯದ ಗಾಯದಿಂದ ಚೇತರಿಸಿಕೊಂಡ ಬಳಿಕ ಪ್ರಣಯ್ ಗೆದ್ದ ಮೊದಲ ಪ್ರಶಸ್ತಿ ಇದಾಗಿದೆ. ಕಳೆದ ವರ್ಷ ಸ್ವಿಸ್ ಓಪನ್‌ನಲ್ಲಿ ಕೊನೆಯ ಬಾರಿ ಪ್ರಶಸ್ತಿ ಜಯಿಸಿದ್ದರು.

  ಈ ವರ್ಷ ಮೂರನೆ ಬಾರಿ ಭಾರತದ ಆಟಗಾರರು ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಮುಖಾಮುಖಿಯಾದರು. ಸಿಂಗಾಪುರ ಓಪನ್‌ನಲ್ಲಿ ಕಿಡಂಬಿ ಶ್ರೀಕಾಂತ್‌ರನ್ನು ಮಣಿಸಿದ್ದ ಬಿ.ಸಾಯಿ ಪ್ರಣೀತ್ ಪ್ರಶಸ್ತಿ ಜಯಿಸಿದ್ದರು. ಸೈಯದ್ ಮೋದಿ ಇಂಟರ್‌ನ್ಯಾಶನಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಸಮೀರ್ ವರ್ಮ ಅವರು ಪ್ರಣೀತ್‌ರನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿದ್ದರು.

‘‘ಇದು ನನ್ನ ಪಾಲಿಗೆ ಶ್ರೇಷ್ಠ ಗೆಲುವು. ಸಹ ಆಟಗಾರ ಪಿ.ಕಶ್ಯಪ್ ತೀವ್ರ ಪೈಪೋಟಿ ನೀಡಿದ್ದರು. ನನಗೆ ಪ್ರೋತ್ಸಾಹ ನೀಡಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ’’ ಎಂದು ಪ್ರಣಯ್ ಟ್ವೀಟ್ ಮಾಡಿದ್ದಾರೆ.

ಮೊದಲ ಗೇಮ್‌ನ ಆರಂಭದಲ್ಲಿ ಕಶ್ಯಪ್ 6-1 ರಿಂದ ಮುನ್ನಡೆ ಸಾಧಿಸಿದ್ದರು. ಆಕ್ರಮಣಕಾರಿ ಆಟವಾಡಿದ ಪ್ರಣಯ್ ತಕ್ಷಣವೇ ತಿರುಗೇಟು ನೀಡಿದರು. ಒಂದು ಹಂತದಲ್ಲಿ ಇಬ್ಬರೂ ಆಟಗಾರರು 12-12 ರಿಂದ ಸಮಬಲ ಸಾಧಿಸಿದರು. ಅಂತಿಮವಾಗಿ ಪ್ರಣಯ್ ಮೊದಲ ಗೇಮ್‌ನ್ನು 21-15 ಅಂತರದಿಂದ ಗೆದ್ದುಕೊಂಡರು.
ಎರಡನೆ ಗೇಮ್‌ನ ಆರಂಭದಲ್ಲಿ ಇಬ್ಬರೂ ಆಟಗಾರರ ನಡುವೆ ತೀವ್ರ ಪೈಪೋಟಿ ಕಂಡುಬಂದಿತು. ಕಶ್ಯಪ್ 14-10ರಿಂದ ಮುನ್ನಡೆ ಸಾಧಿಸಿದರು. ಪ್ರತಿ ಹೋರಾಟ ನೀಡಿದ ಪ್ರಣಯ್ 18-18 ರಿಂದ ಸಮಬಲಗೊಳಿಸಿದರು. ಕೊನೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕಶ್ಯಪ್ 22-20 ರಿಂದ ಎರಡನೆ ಗೇಮ್‌ನ್ನು ಗೆದ್ದುಕೊಂಡರು.

 ಮೂರನೆ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ಕಶ್ಯಪ್ ಕೆಲವು ತಪ್ಪೆಸಗಿದರು. ಇದರ ಲಾಭವೆತ್ತಿದ ಪ್ರಣಯ್ ಆರಂಭದಲ್ಲೇ 7-3 ಮುನ್ನಡೆ ಸಾಧಿಸಿದರು. ಕೆಲವೊಂದು ಅದ್ಭುತ ಹೊಡೆತ ಬಾರಿಸಿದ ಪ್ರಣಯ್ 15-8 ರಿಂದ ಮುನ್ನಡೆ ಸಾಧಿಸಿದರು. 25ರ ಹರೆಯದ ಪ್ರಣಯ್ 21-12 ರಿಂದ ಮೂರನೆ ಗೇಮ್‌ನ್ನು ಗೆಲ್ಲುವುದರೊಂದಿಗೆ ಪ್ರಶಸ್ತಿ ಬಾಚಿಕೊಂಡರು. ಫೈನಲ್ ತಲುಪುವ ಮೊದಲು ಇಬ್ಬರೂ ಶಟ್ಲರ್‌ಗಳು ಉತ್ತಮ ಪ್ರದರ್ಶನ ನೀಡಿದ್ದರು. ಪ್ರಣಯ್ ಮೊದಲ ಸೆಮಿ ಫೈನಲ್‌ನಲ್ಲಿ ವಿಯೆಟ್ನಾಂನ ಟಿಯೆನ್ ಮಿನ್ ಗುಯೆನ್‌ರನ್ನು 21-14, 21-19 ರಿಂದ ಮಣಿಸಿದ್ದರು. ಎರಡನೆ ಸೆಮಿ ಫೈನಲ್‌ನಲ್ಲಿ ಕಶ್ಯಪ್ ಕೊರಿಯಾದ ಕ್ವಾಂಗ್ ಹೀ ಹಿಯೊರನ್ನು 15-21, 21-15, 21-16 ಗೇಮ್‌ಗಳ ಅಂತರದಿಂದ ಮಣಿಸಿ ಫೈನಲ್‌ಗೆ ತಲುಪಿದ್ದರು. ಒಂದು ಗಂಟೆ, 6 ನಿಮಿಷಗಳ ಹೋರಾಟದಲ್ಲಿ ಕೊರಿಯ ಆಟಗಾರನನ್ನು ಮಣಿಸಿದ್ದ ಕಶ್ಯಪ್ 21 ತಿಂಗಳ ಬಳಿಕ ಫೈನಲ್‌ಗೆ ಪ್ರವೇಶಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News