ಗ್ರಾಮ ಪಂಚಾಯಿತಿ ಗುತ್ತಿಗೆ ನೌಕರರ ಖಾಯಂಗೆ ಆಗ್ರಹಿಸಿ ಬೃಹತ್ ರ‍್ಯಾಲಿ
ಬೆಂಗಳೂರು, ಜು.25: ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿರುವ ನೌಕರರನ್ನು ಖಾಯಂಗೊಳಿಸಬೇಕು ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಫೆಡರೇಷನ್ ಸದಸ್ಯರು ಬೃಹತ್ ರ‍್ಯಾಲಿ ನಡೆಸಿದರು.
ಮಂಗಳವಾರ ನಗರದ ಸಿಟಿ ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್‌ವರೆಗೂ ನೂರಾರು ಗ್ರಾಮ ಪಂಚಾಯಿತಿ ನೌಕರರು ರ‍್ಯಾಲಿ ನಡೆಸಿ, ರಾಜ್ಯ ಸರಕಾರ ತಮ್ಮ ಒಂಭತ್ತು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.
ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಫೆಡರೇಷನ್ ರಾಜ್ಯಾಧ್ಯಕ್ಷ ಎಚ್.ಕೆ.ರಾಮಚಂದ್ರಪ್ಪ, ರಾಜ್ಯದ 5,653 ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿರುವವರನ್ನು ಪೌರ ಕಾರ್ಮಿಕರಂತೆ ಖಾಯಂಗೊಳಿಸಿ, ಸಂಕಷ್ಟ ವೇತನ ಕೊಡಬೇಕೆಂಬುದು ಪ್ರಮುಖ ಬೇಡಿಕೆಯಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿಗಳಲ್ಲಿ ಜಾಡಮಾಲಿ, ಬಿಲ್ ಕಲೆಕ್ಟರ್, ಜವಾನರು, ನೀರುಗಂಟಿ, ಡಾಟಾ ಎಂಟ್ರಿ ಆಪರೇಟರ್‌ಗಳು ಪಂಚಾಯತ್ ಅಧಿನಿಯಮ 112 ಮತ್ತು 113ರ ಅಡಿಯಲ್ಲಿ ನೇಮಕಗೊಂಡಿದ್ದಾರೆ ಎಂದ ಅವರು, ಗ್ರಾಮ ನೈರ್ಮಲ್ಯ, ವಿದ್ಯುತ್ ಸಮಸ್ಯೆ, ನೀರಿನ ಸಮಸ್ಯೆಯ ನಡುವೆಯೂ ಹಗಲು ರಾತ್ರಿ ನೀರು ಪೂರೈಸುವ ಕೆಲಸ ಸೇರಿ ಅನೇಕ ರೀತಿಯ ಕೆಲಸಗಳನ್ನು ನೌಕರರು ಮಾಡುತ್ತಿದ್ದಾರೆ. ಆದರೆ, ಸಮಾನ ಕೆಲಸಕ್ಕೆ ಸಮಾನ ವೇತನವಿಲ್ಲ. ಸೇವಾ ಭದ್ರತೆಯೂ ಇಲ್ಲ ಎಂದು ಆರೋಪಿಸಿದರು.
ಈ ನೌಕರರು ರಾಜ್ಯ ಸರಕಾರವೇ ರೂಪಿಸಿರುವ ಕನಿಷ್ಠ ಕೂಲಿ ವ್ಯಾಪ್ತಿಗೂ ಬಾರದೇ ವಂಚಿತರಾಗಿದ್ದಾರೆ. ನೌಕರರಿಗೆ ವೇತನ ಪಾವತಿ ಹೊಣೆಯನ್ನು ಗ್ರಾಮ ಪಂಚಾಯಿತಿಗೆ ವಹಿಸಲಾಗಿದೆ. ಆದರೆ, ಅಧಿಕಾರಿಗಳು ಆರ್ಥಿಕ ಸಂಕಷ್ಟ ಸೃಷ್ಟಿಸಿ ನೌಕರರಿಗೆ 15 ತಿಂಗಳಿಂದ ವೇತನ ಬಾಕಿ ಉಳಿಸಿದ್ದಾರೆ ಎಂದರು.
ಪ್ರಧಾನ ಕಾರ್ಯದರ್ಶಿ ಎನ್.ಶಿವಣ್ಣ ಮಾತನಾಡಿ, ಪಂಚಾಯಿತಿ ನೌಕರರಿಗೆ ಇನ್ನು ಮುಂದೆ ಪಂಚಾಯ್ತಿ ಬದಲಾಗಿ ರಾಜ್ಯ ಸರಕಾರವೇ ನೇರವಾಗಿ ವೇತನ ಪಾವತಿ ಮಾಡಬೇಕು, ಸರಕಾರಿ ನೌಕರರೆಂದು ಪರಿಗಣಿಸಬೇಕು, ಜಾಡಮಾಲಿಗಳ ಸೇವೆ ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು.
ರ‍್ಯಾಲಿಯಲ್ಲಿ ಪ್ರಧಾನ ಕಾರ್ಯದರ್ಶಿ ಎಸ್.ವಿಜಯಕುಮಾರ್, ಕಾರ್ಯಾಧ್ಯಕ್ಷ ಕೆ.ಎನ್.ರಮೇಶ್, ಧರ್ಮರಾಜ್, ಗಿರೀಶ್ ಸೇರಿ ಪ್ರಮುಖರು ಹಾಜರಿದ್ದರು.
ನೌಕರರ ಬೇಡಿಕೆಗಳು
- ಸೇವಾ ಭದ್ರತೆ ಒದಗಿಸಬೇಕು
- ಪ್ರತಿ ತಿಂಗಳು 5ನೇ ತಾರೀಖಿನೊಳಗಡೆ ವೇತನ ನೀಡಬೇಕು
- ನಿವೃತ್ತಿ ಅಂಚಿನಲ್ಲಿರುವ ನೌಕರರಿಗೆ ಒಂದು ಲಕ್ಷ ಪರಿಹಾರ ಕೊಡಬೇಕು
- ಜನಶ್ರೀ ವಿಮಾ ಹಣವನ್ನು ಮಂಜೂರು ಮಾಡಿಸಬೇಕು
- 10,500 ಕನಿಷ್ಠ ವೇತನ ನಿಗದಿಪಡಿಸಿ ಜಾರಿಗೊಳಿಸಬೇಕು
- ನಿವೃತ್ತಿ ಪರಿಹಾರ ಹಣ ಕೊಡಬೇಕು