ಶಿಕ್ಷಕರ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಣೆ

Update: 2017-07-25 16:35 GMT

ಬೆಂಗಳೂರು, ಜು.25: ಪಾಠ ನಡೆಯುತ್ತಿದ್ದಾಗ ಅಶ್ಲೀಲ ಚಿತ್ರ ವೀಕ್ಷಿಸಿದ ಆರೋಪದ ಮೇಲೆ ತರಗತಿಯಿಂದ ಹೊರದೂಡಲ್ಪಟ್ಟಿದ್ದ ಎಂಬಿಎ ವಿದ್ಯಾರ್ಥಿಯು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರ ವಿರುದ್ಧ ದಾಖಲಾಗಿದ್ದ ಆತ್ಮಹತ್ಯೆ ಪ್ರಚೋದನೆ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

 ವಿದ್ಯಾರ್ಥಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಸಂಬಂಧ ಭದ್ರಾವತಿ ಗ್ರಾಮಾಂತರ ಠಾಣಾ ಪೊಲೀಸರು ತಮ್ಮ ವಿರುದ್ಧ ದಾಖಲಿಸಿದ್ದ ಪ್ರಕರಣ ರದ್ದುಪಡಿಸುವಂತೆ ಕೋರಿ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಚ್.ಎನ್.ರಮೇಶ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ಪೀಠವು, ಪ್ರಕರಣ ರದ್ದುಪಡಿಸಲು ನಿರಾಕರಿಸಿತು. ಪ್ರಕರಣ ಗಂಭೀರವಾಗಿರುವ ಹಿನ್ನೆಲೆಯಲ್ಲಿ ರದ್ದುಪಡಿಸಲಾಗದು.

ಈ ಕುರಿತು ತನಿಖೆ ಎದುರಿಸಬೇಕು ಎಂದು ನ್ಯಾಯಾಲಯ ಮೌಖಿಕವಾಗಿ ಅಭಿಪ್ರಾಯಪಟ್ಟು, ರಮೇಶ್ ಅವರ ವಿರುದ್ಧದ ಪ್ರಕರಣ ರದ್ದುಪಡಿಸಲು ನಿರಾಕರಿಸಿತು. ಇದರಿಂದ ರಮೇಶ್ ಅವರ ಪರ ವಕೀಲರು ಅರ್ಜಿಯನ್ನು ಹಿಂಪಡೆದರು.

2017ರ ಮೇ 17ರಂದು ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಎಚ್.ಎನ್.ರಮೇಶ್ ಅವರು ಎಂಬಿಎ ತರಗತಿಯಲ್ಲಿ ಮಾರ್ಕೆಟಿಂಗ್ ವಿಷಯದ ಪಾಠ ಮಾಡುತ್ತಿದ್ದರು. ಈ ವೇಳೆ ಶ್ರೀಧರ್ ಪಾಟೀಲ ಎಂಬ ವಿದ್ಯಾರ್ಥಿಯು ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ನೋಡುತ್ತಿದ್ದ ಎಂಬ ಕಾರಣಕ್ಕೆ ಪ್ರಾಧ್ಯಾಪಕರು, ವಿದ್ಯಾರ್ಥಿಯ ಕೊರಳಿನ ಪಟ್ಟಿ ಹಿಡಿದುಕೊಂಡು ಹೋಗಿ ತರಗತಿಯಿಂದ ಹೊರಗೆ ತಳ್ಳಿದ್ದರು. ಇದರಿಂದ ಮನನೊಂದ ವಿದ್ಯಾರ್ಥಿಯು ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿದ್ದ ತನ್ನ ಕೋಣೆಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಇದಕ್ಕೂ ಮುನ್ನ ಬರೆದಿದ್ದ ಮರಣ ಪತ್ರದಲ್ಲಿ, ‘ನಾನು ಅಶ್ಲೀಲ ಚಿತ್ರ ನೋಡುತ್ತಿದ್ದೆ ಎಂದು ತಪ್ಪಾಗಿ ಭಾವಿಸಿ ಪ್ರಾಧ್ಯಾಪಕ ನನಗೆ ಅವಮಾನ ಮಾಡಿದ್ದಾರೆ. ಇದರಿಂದಲೇ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಪ್ರಾಧ್ಯಾಪಕ ರಮೇಶ್ ಕಾರಣ’ ಎಂದು ತಿಳಿಸಿದ್ದ.

 ಇದರಿಂದ ವಿದ್ಯಾರ್ಥಿಯ ತಂದೆ ಬಸವರಾಜ್ ಪಾಟೀಲ್ ಅವರು, ರಮೇಶ್ ಅವರ ವಿರುದ್ಧ ಭದ್ರಾವತಿ ಗ್ರಾಮಾಂತರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ, ಈ ಪ್ರಕರಣ ರದ್ದು ಕೋರಿ ರಮೇಶ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News