ಬುಡಕಟ್ಟು ಮಹಿಳೆಯ ಸಾಮೂಹಿಕ ಅತ್ಯಾಚಾರಗೈದು, ಮುಖಕ್ಕೆ ಆ್ಯಸಿಡ್ ಎರಚಿದ ಬಿಎಸ್ ಎಫ್ ಸಿಬ್ಬಂದಿ

Update: 2017-07-26 09:00 GMT

ಸಿಲ್ಸುರಿ, ಜು.26: ಮಿಜೋರಂ ರಾಜ್ಯದ ಮಮಿತ್ ಜಿಲ್ಲೆಯ ಸಿಲ್ಸುರಿ ಗಡಿ ಔಟ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಬಿಎಸ್ ಎಫ್ ಸಿಬ್ಬಂದಿ ಚಕ್ಮಾ ಬುಡಕಟ್ಟು ಮಹಿಳೆಯೊಬ್ಬಳರನ್ನು ಸಾಮೂಹಿಕ ಅತ್ಯಾಚಾರಗೈದು ಆಕೆಯ ಮುಖಕ್ಕೆ ಆ್ಯಸಿಡ್ ಎರಚಿದ್ದಾರೆ ಎಂದು 'ನ್ಯೂಸ್ ಲಾಂಡ್ರಿ' ವೆಬ್ ಸೈಟ್ ವರದಿ ಮಾಡಿದೆ. 

ಘಟನೆ ಜುಲೈ 16ರಂದು ಭಾರತ-ಬಾಂಗ್ಲಾದೇಶದ ಗಡಿ ಭಾಗದಲ್ಲಿರುವ ಪ್ರದೇಶದಲ್ಲಿ ನಡೆದಿದೆ. ರೇಪ್ ಸಂತ್ರಸ್ತೆಯ ಪ್ರಕಾರ ಆಕೆಯನ್ನು ಇಬ್ಬರು ಬಿ ಎಸ್ ಎಫ್ ಸಿಬ್ಬಂದಿಯೆಂದು ಹೇಳಲಾದ ವ್ಯಕ್ತಿಗಳು ದಾರಿ ಮಧ್ಯದಲ್ಲಿ ತಡೆದು ನಿಲ್ಲಿಸಿ ಅತ್ಯಾಚಾರ  ನಡೆಸಿದ್ದಾರೆ. ಸಂತ್ರಸ್ತೆ ಇನ್ನೊಬ್ಬ ಬುಡಕಟ್ಟು ಮಹಿಳೆ ರಂಗಬಿ ಚಕ್ಮಾಳೊಂದಿಗೆ ಕಾಡಿಗೆ ಬಿದಿರಿನ ಕಳಲೆಯನ್ನು ಸಂಗ್ರಹಿಸಲು ಹೋಗಿದ್ದಾಗ ಘಟನೆ ನಡೆದಿದೆ ಎನ್ನಲಾಗಿದೆ.

ತಾನು ಅವರಿಗೆ ಪ್ರತಿರೋಧ ತೋರಿದಾಗ ಆ್ಯಸಿಡ್ ಇದ್ದ ಬಟ್ಟೆಯೊಂದನ್ನು ತನ್ನ ಮುಖಕ್ಕೆ ಉಜ್ಜಿದ್ದರೆಂದೂ ಆಕೆ ಆರೋಪಿಸಿದ್ದಾಳೆ. ಮುಖ ಹಾಗೂ ಕಣ್ಣುಗಳಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಆಕೆ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಆಕೆ ತನ್ನ ಮೇಲೆ ಅತ್ಯಾಚಾರಗೈದವರನ್ನು ಬಿ ಎಸ್ ಎಫ್ ಸಿಬ್ಬಂದಿ ಎಂದು ಗುರುತಿಸಿದ್ದಾಳೆ.

ಈ ಪ್ರಕರಣದ ತನಿಖೆ ನಡೆಯುತ್ತಿದ್ದಂತೆಯೇ, ಅತ್ಯಾಚಾರ ಸಂತ್ರಸ್ತೆಯ ಜತೆ ಜುಲೈ 16ರಂದು ಇದ್ದ ಮಹಿಳೆ ರಂಗಬಿ ಚಕ್ಮಾಳ  ಕೊಳೆತ ದೇಹ  ಜುಲೈ 22ರಂದು ಪತೆಯಾಗಿದೆ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೇ ಎಂಬುದು ತಿಳಿದು ಬಂದಿಲ್ಲವಾದರೂ ಆರೋಪಿಗಳು ತಮ್ಮ ಕೃತ್ಯಕ್ಕೆ ಸಾಕ್ಷಿಯಾಗಿದ್ದ ಸಂತ್ರಸ್ತೆಯ ಗೆಳತಿಯ ಕಥೆ ಮುಗಿಸಿರಬೇಕೆಂದು ಶಂಕಿಸಲಾಗಿದೆ.

ಈ ಎರಡು ಘಟನೆಗಳ ತನಿಖೆಯನ್ನು ಮಿಜೋರಂ ಪೊಲೀಸರು ಚುರುಕುಗೊಳಿಸಿದ್ದು ಗಡಿ ಪ್ರದೇಶದಲ್ಲಿ ಕರ್ತವ್ಯದಲ್ಲಿರುವ ಎಲ್ಲಾ ಬಿಎಸ್‍ಎಫ್ ಜವಾನರಿಗೆ ಬುಲಾವ್ ಕಳುಹಿಸಿ ಅವರ ಫೋಟೋಗಳನ್ನು ತೆಗೆಯಲಾಗಿದೆ. ರೇಪ್ ಸಂತ್ರಸ್ತೆ ತನ್ನ ಹೇಳಿಕೆಯನ್ನು ಮಮಿತ್ ಜಿಲ್ಲೆಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಸಮ್ಮುಖ ದಾಖಲಿಸುವಂತೆಯೂ ಕ್ರಮ ಕೈಗೊಳ್ಳಲಾಗಿದೆ.

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಬಿ ಎಸ್ ಎಫ್ ಸಾರ್ವಜನಿಕ ಸಂಪರ್ಕಾಧಿಕಾರಿ ಶುಭೇಂದು  ಭಾರದ್ವಾಜ್, ``ತನಿಖೆ ಪ್ರಗತಿಯಲ್ಲಿದೆ. ನಮಗೆ ಕಾನೂನಿನ ಮೇಲೆ ನಂಬಿಕೆಯಿದೆ,'' ಎಂದಷ್ಟೇ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News