ಪ್ರಧಾನಿ ಮೋದಿ ಭೇಟಿಗೆ ಸಚಿವ ಸಂಪುಟ ತೀರ್ಮಾನ
ಬೆಂಗಳೂರು, ಜು. 26: ‘ಬರ ಪರಿಹಾರ ವಿತರಣೆ ಹಾಗೂ ನಿರ್ವಹಣೆ ಸಂಬಂಧ ಕೇಂದ್ರ ಸರಕಾರ ರೂಪಿಸಿರುವ ಪರಿಷ್ಕೃತ ಮಾರ್ಗಸೂಚಿಗೆ ವಿರೋಧ ವ್ಯಕ್ತಪಡಿಸಿರುವ ರಾಜ್ಯ ಸರಕಾರ, ಮಾರ್ಗಸೂಚಿ ಬದಲಾವಣೆಗೆ ಆಗ್ರಹಿಸಿ ಪ್ರಧಾನಿ ಮೋದಿ ಭೇಟಿಗೆ ಸಚಿವ ಸಂಪುಟ ತೀರ್ಮಾನಿಸಿದೆ.
ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಬಳಿಕ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾನೂನು ಸಚಿವ ಜಯಚಂದ್ರ, ಪರಿಷ್ಕೃತ ಮಾರ್ಗಸೂಚಿ ಬದಲಾವಣೆಗೆ ಆಗ್ರಹಿಸಿ ಈಗಾಗಲೇ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಿಎಂ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ ಎಂದರು.
ಇದೀಗ ರಾಜ್ಯದಿಂದ ಆಯ್ಕೆಯಾಗಿರುವ ಸಂಸದರಿಗೆ ಪತ್ರ ಬರೆಯಲಾಗುವುದು. ಮಾತ್ರವಲ್ಲ ಈ ಸಂಬಂಧ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಾಗುವುದು ಎಂದ ಅವರು, ಕೇಂದ್ರದ ಪರಿಷ್ಕೃತ ಮಾರ್ಗಸೂಚಿಯಿಂದ ಬರ ನಿರ್ವಹಣೆ ರಾಜ್ಯ ಸರಕಾರಕ್ಕೆ ಸಾಧ್ಯವಿಲ್ಲ ಎಂದರು.
ಮಳೆಯ ಪ್ರಮಾಣ, ಬೆಳೆ ನಷ್ಟ, ಭೂಮಿಯ ತೇವಾಂಶ ಆಧರಿಸಿ ಬರ ಸ್ಥಿತಿ ನಿರ್ಧರಿಸಲಾಗುತ್ತಿತ್ತು. ಆದರೆ, ಪರಿಷ್ಕೃತ ಮಾರ್ಗಸೂಚಿಯನ್ವಯ ಶೇ.50ರಷ್ಟು ಬೆಳೆ ನಷ್ಟವಾಗಿದ್ದರೆ ಮಾತ್ರ ಬರ ಪೀಡಿತ ಪ್ರದೇಶವೆಂದು ಘೋಷಿಸಬೇಕು. ಕೇಂದ್ರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತಿದೆ ಎಂದು ಅವರು ಟೀಕಿಸಿದರು.
ಹಿಂದಿನ ವರ್ಷ 160 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿತ್ತು. ಪ್ರಸಕ್ತ ವರ್ಗ ಪರಿಷ್ಕೃತ ಮಾರ್ಗಸೂಚಿಯನ್ವಯ ಕೇವಲ 36 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲು ಸಾಧ್ಯವಿಲ್ಲ. ಇದರಿಂದ ಎನ್‌ಡಿಆಫ್‌ಎಫ್ ಅಡಿ ರಾಜ್ಯಕ್ಕೆ ಬರುವ ಅನುದಾನ ಕಡಿತವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮುಂಗಾರು ವೈಫಲ್ಯದಿಂದ ಉಂಟಾದ ಬೆಳೆ ನಷ್ಟಕ್ಕೆ ಕೇಂದ್ರ ಬಿಡುಗಡೆ ಮಾಡಿದ 1,630ಕೋಟಿ ರೂ.ರೈತರ ಖಾತೆಗಳಿಗೆ ಪಾವತಿಸಲಾಗಿದೆ. ಅಲ್ಲದೆ, ಹಿಂಗಾರು ವೈಫಲ್ಯದಿಂದ ಆಗಿರುವ ಬೆಳೆ ನಷ್ಟಕ್ಕೆ ಕೇಂದ್ರ ಬಿಡುಗಡೆ ಮಾಡಿರುವ 795 ಕೋಟಿ ರೂ.ಪರಿಹಾರ ಮೊತ್ತದ ಪೈಕಿ ಈ ದಿನ 402ಕೋಟಿ ರೂ.ಗಳನ್ನು 5.5ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಆನ್‌ಲೈನ್ ಮೂಲಕ ಜಮಾ ಮಾಡಲಾಗಿದೆ. ಉಳಿಕೆ 393 ಕೋಟಿ ರೂ ಪರಿಹಾರ ಮೊತ್ತ ಹತ್ತು ದಿನಗಳಲ್ಲಿ ರೈತರಿಗೆ ಪಾವತಿ ಮಾಡಲು ಕ್ರಮ ವಹಿಸಲಾಗಿದೆ ಎಂದರು.
ಕೆರೆಗಳ ಡಿ-ನೋಟಿಫೈ ಪ್ರಸ್ತಾವವಿಲ್ಲ: ಕೆರೆಗಳ ಡಿ-ನೋಟಿಫೈ ಕುರಿತ ಸುದ್ದಿ-ಚರ್ಚೆಗಳು ನಡೆಯುತ್ತಿರುವ ಬಗ್ಗೆ ಸಂಪುಟವು ಸೋಜಿಗ ವ್ಯಕ್ತಪಡಿಸಿದೆ. ಇಲಾಖಾ ಮಟ್ಟದಲ್ಲಿ ಕೆಳಹಂತದಲ್ಲಿ ಪತ್ರ ವ್ಯವಹಾರಗಳು ನಡೆದಿರಬಹುದು. ಆದರೆ, ಅಂತಹ ಯಾವುದೇ ಪ್ರಸ್ತಾವ ಸರಕಾರದ ಮಟ್ಟದಲ್ಲಿ ಪರಿಶೀಲನೆಯಲ್ಲಿಲ್ಲ. ಅಲ್ಲದೆ, ಈ ಬಗ್ಗೆ ಈವರೆಗೆ ಸರಕಾರ ಈ ನಿಟ್ಟಿನಲ್ಲಿ ಯಾವುದೇ ತೀರ್ಮಾನವನ್ನು ತೆಗೆದುಕೊಂಡಿಲ್ಲ ಎಂದರು.
ಭೂ ಒತ್ತುವರಿ: ರಾಮನಗರದ ಬಿಡದಿ ಹೋಬಳಿ ಶ್ಯಾನಮಂಗಲ, ಬಿಲ್ಲ ಕೆಂಪನಹಳ್ಳಿ ಹಾಗೂ ಬಾನಂದೂರು ಗ್ರಾಮಗಳಲ್ಲಿ 77 ಎಕರೆ ಸರಕಾರಿ ಭೂಮಿ ಒತ್ತುವರಿ ಮಾಡಿರುವ ಚಾಮುಂಡೇಶ್ವರಿ ಬಿಲ್ಡ್‌ಟೆಕ್ ಪ್ರೈ.ಲಿ. ಈಗಲ್‌ಟನ್ ಗಾಲ್ಫ್ ರೆಸಾರ್ಟ್‌ಗೆ ಸುಪ್ರೀಂ ಕೋರ್ಟ್ ಆದೇಶದಂತೆ ಮಾರುಕಟ್ಟೆ ದರದ ಆಧಾರದ ಮೇರೆಗೆ ರಾಜ್ಯ ಸರಕಾರವು ವಿಧಿಸಿರುವ ದಂಡ 982.07ಕೋಟಿ ರೂ.ಗಳನ್ನು ಒಂದು ತಿಂಗಳೊಳಗಾಗಿ ಪಾವತಿಸಿದಲ್ಲಿ ಜಮೀನು ಸಕ್ರಮಕ್ಕೆ ಸಂಪುಟ ಸಮ್ಮತಿಸಿದೆ. ಪರಿವರ್ತನಾ ಶುಲ್ಕವನ್ನು ಹೊರತು ಪಡಿಸಿ 12.35 ಕೋಟಿ ರೂ ಪಾವತಿಸಿದಲ್ಲಿ ರೆಸಾರ್ಟ್‌ಗೆ ಜಮೀನು ಮಂಜೂರು ಮಾಡಬಹುದು ಎಂದು ಕೋರ್ಟ್‌ನಲ್ಲಿ ಕಂದಾಯ ಇಲಾಖೆ ಪ್ರಮಾಣ ಪತ್ರ ಸಲ್ಲಿಸಿತ್ತು ಎಂದು ಜಯಚಂದ್ರ ಇದೇ ವೇಳೆ ತಿಳಿಸಿದರು.
ಸಾಲಕ್ಕೆ ಖಾತ್ರಿ: ಪ್ರಸಕ್ತ ಸಾಲಿನಲ್ಲಿ ನಬಾರ್ಡ್‌ನಿಂದ ರಾಜ್ಯ ಸಹಕಾರ, ಕೃಷಿ ಹಾಗೂ ಅಭಿವೃದ್ಧಿ ಬ್ಯಾಂಕ್‌ಗಳು 1,550 ಕೋಟಿ ರೂ.ಗಳ ಸಾಲ ಪಡೆಯಲು ರಾಜ್ಯ ಸರಕಾರ ಪ್ರತಿ ಖಾತರಿ ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.
ಅನುಮೋದನೆ: ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ನಡೆಸಲಾಗುತ್ತಿರುವ ವಸತಿ ಶಾಲೆ ಹಾಗೂ ಕಾಲೇಜುಗಳಿಗೆ 78.67ಕೋಟಿ ರೂ. ಮೊತ್ತದ ಪೀಠೋಪಕರಣ ಹಾಗೂ ಎಸ್ಸಿ-ಎಸ್ಟಿ ವಸತಿ ನಿಲಯಗಳ 14 ಸಾವಿರ ವಿದ್ಯಾರ್ಥಿಗಳಿಗೆ 25.82 ಕೋಟಿ ರೂ.ವೆಚ್ಚದಲ್ಲಿ ಊಟದ ಮೇಜುಗಳನ್ನು ಖರೀದಿಸಲು ಸಂಪುಟವು ಅನುಮೋದನೆ ನೀಡಿದೆ.
ಮೈಸೂರು ರೇಶ್ಮೆ ನೇಯ್ಗೆ ಕಾರ್ಖಾನೆಯ ಆವರಣದಲ್ಲಿ 24.07ಕೋಟಿ ರೂ. ವೆಚ್ಚದಲ್ಲಿ ಎರಡನೆ ಸಂಘಟಿತ ನೇಯ್ಗೆ ಕಾರ್ಖಾನೆ ಹಾಗೂ ಚೆನ್ನಪಟ್ಟಣದಲ್ಲಿ 8.77 ಕೋಟಿ ರೂ.ವೆಚ್ಚದಲ್ಲಿ ಮೃದುರೇಶ್ಮೆ (ಸಾಫ್ಟ್‌ಸಿಲ್ಕ್ )ಉತ್ಪಾದನಾ ಘಟಕವನ್ನು ಪ್ರಾರಂಭಿಸಲು ಸಂಪುಟವು ಅನುಮೋದನೆ ನೀಡಿದೆ.